15 ಲಕ್ಷ ಲಂಚಕ್ಕೆ ಡಿಮ್ಯಾಂಡ್ – ಬೆಸ್ಕಾಂ ಎಇಇ ಅರೆಸ್ಟ್!

ಬೆಂಗಳೂರು : 15 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಬೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ.

ಮಂಜೂರಾಗಿದ್ದಕ್ಕಿಂತ ಹೆಚ್ಚು ವಿದ್ಯುತ್ ಬಳಸಿದ ಪ್ರಕರಣದಲ್ಲಿ ಅಪಾರ್ಟ್‌ಮೆಂಟ್‌ಗೆ ಕಡಿಮೆ ಮೊತ್ತದ ದಂಡ ವಿಧಿಸಲು ಎಇಇ ಬಿ.ಎಸ್.ಬಸವರಾಜಯ್ಯ 18 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದು, ಲಂಚ ಪಡೆಯುವಾಗ ಆತನನ್ನು ಲೋಕಾಯುಕ್ತ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ದೊಡ್ಡಬಳ್ಳಾಪುರ ನಿವಾಸಿ ಅಂಬರೀಶ್ ವಿ. ಎಂಬುವವರು ರಾಜಾಜಿನಗರ ಬೆಸ್ಕಾಂ ಜಾಗೃತ ದಳ ಠಾಣೆ ವ್ಯಾಪ್ತಿಯಲ್ಲಿ ಅಪಾರ್ಟ್‌ಮೆಂಟ್ ಹೊಂದಿದ್ದಾರೆ. ಅಪಾರ್ಟ್‌ಮೆಂಟ್‌ಗೆ ಮಂಜೂರಾಗಿದ್ದಕ್ಕಿಂತ ಹೆಚ್ಚು ವಿದ್ಯುತ್ ಬಳಕೆ ಮತ್ತು ಅಕ್ರಮ ಬಳಕೆ ವಿರುದ್ಧ ಬೆಸ್ಕಾಂ ಜಾಗೃತ ದಳವು ಪ್ರಕರಣ ದಾಖಲಿಸಿತ್ತು.

ಪ್ರಕರಣದ ಸಂಬಂಧ ಅಪಾರ್ಟ್‌ಮೆಂಟ್‌ಗೆ ದಂಡ ವಿಧಿಸಲಾಗಿತ್ತು. ದಂಡದ ಮೊತ್ತವನ್ನು ಕಡಿಮೆ ಮಾಡಲು ಜಾಗೃತ ದಳದ ಎಇಇ ಬಸವರಾಜಯ್ಯ ಅವರು 18 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು, 15 ಲಕ್ಷ ಪಡೆದುಕೊಳ್ಳಲು ಒಪ್ಪಿಕೊಂಡಿದ್ದರು. ಈ ಬಗ್ಗೆ ಅಂಬರೀಶ್ ಅವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.

ದೂರಿನ ಆಧಾರದಲ್ಲಿ ಲೋಕಾಯುಕ್ತ ಪೊಲೀಸರು, ಎಸ್‌ಪಿ ಶಿವಪ್ರಕಾಶ್ ದೇವರಾಜು ಅವರ ಮಾರ್ಗದರ್ಶನದಂತೆ ಕಾರ್ಯಾಚರಣೆ ನಡೆಸಿದ್ದು, ಅದರಂತೆ ದೂರುದಾರರು ಶುಕ್ರವಾರ ಆರೋಪಿ ಅವರ ಕಚೇರಿಗೆ ತೆರಳಿ ಲಂಚದ ಹಣ ನೀಡಿದ್ದರು. ಇದೇ ವೇಳೆ ದಾಳಿ ನಡೆಸಿ ಎಇಇ ಅವರನ್ನು ಬಂಧಿಸಲಾಯಿತು. ಲೋಕಾಯುಕ್ತ ಪೊಲೀಸರು ಹಣವನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರೆಸಿದ್ದಾರೆ.

ಇದನ್ನೂ ಓದಿ : ನಟ ಕೋಮಲ್ ಅಭಿನಯದ ʼತೆನಾಲಿ ಡಿ LLB’ ಚಿತ್ರಕ್ಕೆ ಅದ್ಧೂರಿ ಮುಹೂರ್ತ!

Btv Kannada
Author: Btv Kannada

Leave a Comment

Read More