ನವದೆಹಲಿ : ವಾಹನ ಸವಾರರಿಗೆ ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆಯ ಬಿಸಿ ತಟ್ಟಿದೆ. ಕೇಂದ್ರ ಸರ್ಕಾರ ಇಂದು ಪೆಟ್ರೋಲ್ ಮೇಲಿನ ಬೆಲೆ ಪ್ರತಿ ಲೀಟರ್‌ಗೆ 2.61 ರೂ. ಮತ್ತು ಡೀಸೆಲ್ ಬೆಲೆ ಪ್ರತಿ ಲೀಟರ್‌ಗೆ 2.71 ರೂ. ಏರಿಕೆ ಮಾಡಿದೆ. ಜಾಗತಿಕ ಕಚ್ಚಾ ತೈಲ ದರ ಹೆಚ್ಚಳದಿಂದಾಗಿ 11 ದಿನಗಳಲ್ಲಿ ಇದು 4ನೇ ಬಾರಿ ದರ ಏರಿಕೆಯಾಗಿದೆ.
ಬೆಂಗಳೂರು ನಗರದಲ್ಲಿ ಪೆಟ್ರೋಲ್ ಬೆಲೆ ಈಗ ಲೀಟರ್‌ಗೆ 110.89 ರೂ. ಹಾಗೂ ಡೀಸೆಲ್ ಬೆಲೆ ಲೀಟರ್‌ಗೆ 98.80 ರೂ.ಗೆ ತಲುಪಿದೆ. ಮೇ 15ರಿಂದ ದರ ಪರಿಷ್ಕರಣೆ ಪುನರಾರಂಭವಾದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಒಟ್ಟು ಸುಮಾರು 7.5 ರೂ. ಏರಿಕೆಯಾಗಿದೆ.
ಮೇ 15 ರಂದು ಮೊದಲ ಬಾರಿಗೆ ಏಕಾಏಕಿ ಪೆಟ್ರೋಲ್, ಡೀಸೆಲ್ ಮೇಲಿನ ಬೆಲೆಯನ್ನು 3 ರೂ. ಹೆಚ್ಚಳ ಮಾಡಿತ್ತು. ಬಳಿಕ ಮೇ 23 ರಂದು ಪೆಟ್ರೋಲ್ ದರವನ್ನು 87 ಪೈಸೆ ಮತ್ತು ಡೀಸೆಲ್ 91 ಪೈಸೆ ಏರಿಕೆ ಮಾಡಲಾಗಿತ್ತು. ಇದೀಗ ಮತ್ತೆ ಪೆಟ್ರೋಲ್ ಮೇಲಿನ ಬೆಲೆ 2.61 ರೂ. ಮತ್ತು ಡೀಸೆಲ್ ಮೇಲಿನ ಬೆಲೆ 2.71 ರೂ. ಏರಿಸಿದೆ. ಈಗಾಲೇ ದರ ಏರಿಕೆಯ ಅಬ್ಬರಕ್ಕೆ ತತ್ತರಿಸಿದ್ದ ದೇಶದ ನಾಗರಿಕರಿಗೆ ಕೇಂದ್ರ ಸರ್ಕಾರದ ನಿರ್ಧಾರ ಶಾಕ್ ನೀಡಿದೆ.
ಇದನ್ನೂ ಓದಿ : ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಕಾರ್ಮಿಕರಿಗೆ ಅನ್ಯಾಯ – ಹಿರಿಯ ವಕೀಲ ಎಸ್. ಬಾಲನ್ ಕಿಡಿ!









