ತಮಿಳುನಾಡು ಸಚಿವ ಸಂಪುಟ ಮತ್ತೆ ವಿಸ್ತರಣೆ – ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ IUML, VCK ನಾಯಕರು!

ಚೆನ್ನೈ : ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಟಿವಿಕೆ ಸರ್ಕಾರದಲ್ಲಿ ಮತ್ತೊಮ್ಮೆ ಸಚಿವ ಸಂಪುಟ ವಿಸ್ತರಣೆಯಾಗಿದೆ. ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (IUML) ಮತ್ತು ವಿದುಥಲೈ ಚಿರುತ್ತೈಗಲ್ ಕಚ್ಚಿ (VCK) ಪಕ್ಷಗಳ ನಾಯಕರು ಇಂದು ನೂತನ ಸಚಿವರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

ಚೆನ್ನೈನ ಲೋಕ ಭವನದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ನೂತನ ಸಚಿವರ ಪ್ರಮಾಣ ವಚನ ಕಾರ್ಯಕ್ರಮ ನೆರವೇರಿತು. ಪಾಪನಾಶಂ ವಿಧಾನಸಭಾ ಕ್ಷೇತ್ರದ ಐಯುಎಂಎಲ್ ಶಾಸಕ ಎ.ಎಂ. ಶಾಹಜಹಾನ್ ಹಾಗೂ ಟಿಂಡಿವನಂ ಕ್ಷೇತ್ರದ ವಿಸಿಕೆ ಶಾಸಕ ವನ್ನಿ ಅರಸು ಅವರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಎ.ಎಂ. ಶಾಹಜಹಾನ್ ಅವರಿಗೆ ಅಲ್ಪ ಸಂಖ್ಯಾತ ಸಮುದಾಯಗಳ ಕಲ್ಯಾಣ ಖಾತೆ ನೀಡಿದ್ದು, ವಕ್ಫ್ ಬೋರ್ಡ್ ಅನ್ನೂ ನೋಡಿಕೊಳ್ಳಲಿದ್ದಾರೆ‌ ವನ್ನಿ ಅರಸು ಅವರಿಗೆ ಸಾಮಾಜಿಕ ನ್ಯಾಯ ಖಾತೆ ನೀಡಲಾಗಿದೆ. ಇದರ ಅಡಿಯಲ್ಲಿ ಆದಿ ದ್ರಾವಿಡ ಕಲ್ಯಾಣ ಮತ್ತು ಹಿಲ್ ಟ್ರೈಬ್ಸ್ ವೆಲ್ಫೇರ್ ಖಾತೆಗಳು ಸೇರಿವೆ.

ಈ ವಿಸ್ತರಣೆಯೊಂದಿಗೆ ಟಿವಿಕೆ ಸರ್ಕಾರದಲ್ಲಿ ಸಹಯೋಗಿ ಪಕ್ಷಗಳ ಪಾಲು ಹೆಚ್ಚಾಗಿದೆ. ಇದಕ್ಕೂ ಮುನ್ನ ನಡೆದ ವಿಸ್ತರಣೆಯಲ್ಲಿ 23 ಮಂದಿ ಸಚಿವರನ್ನು ನೇಮಕ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವು ಸುಮಾರು 59 ವರ್ಷಗಳ ನಂತರ ತಮಿಳುನಾಡಿನಲ್ಲಿ ಸರ್ಕಾರದಲ್ಲಿ ಮೊದಲ ಬಾರಿಗೆ ಸ್ಥಾನ ಪಡೆದುಕೊಂಡಿತ್ತು.

ಇದನ್ನೂ ಓದಿ : ಕಾಂಗ್ರೆಸ್ ಸರ್ಕಾರದ ವಿರುದ್ಧ ರಕ್ಷಣಾ ವೇದಿಕೆ ನಾರಾಯಣಗೌಡರ ಆಕ್ರೋಶ!

Btv Kannada
Author: Btv Kannada

Leave a Comment

Read More