ಮಂಡ್ಯ : ದೇಶದ ಅತ್ಯಂತ ಭ್ರಷ್ಟ ರಾಜ್ಯಗಳಲ್ಲಿ ಕರ್ನಾಟಕ ಐದನೇ ಸ್ಥಾನದಲ್ಲಿದೆ ಎಂದು ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಹೇಳಿದ್ದಾರೆ.
ಮಂಡ್ಯ ಮತ್ತು ಮಳವಳ್ಳಿ ತಾಲೂಕುಗಳಲ್ಲಿ ಬಾಕಿ ಉಳಿದಿದ್ದ ಲೋಕಾಯುಕ್ತ ಪ್ರಕರಣಗಳ ವಿಚಾರಣೆ ಪೂರ್ಣಗೊಳಿಸಿದ ಬಳಿಕ ಮಾತನಾಡಿದ ಅವರು, ಭ್ರಷ್ಟಾಚಾರ ನಿಯಂತ್ರಣಕ್ಕೆ ಬರದಿದ್ದರೆ ಭವಿಷ್ಯದಲ್ಲಿ ದೊಡ್ಡ ಅಪಾಯ ಎದುರಾಗಲಿದೆ. ಬದಲಾವಣೆ ಅಧಿಕಾರಿಗಳಿಂದಲೂ, ನಾಗರಿಕರಿಂದಲೂ ಆಗಬೇಕು ಎಂದರು.
ರಾಜ್ಯದ 16 ಜಿಲ್ಲೆಗಳ ವ್ಯಾಪ್ತಿಯಲ್ಲಿ ಒಟ್ಟು 1,281 ಭ್ರಷ್ಟಾಚಾರ ಪ್ರಕರಣಗಳು ದಾಖಲಾಗಿವೆ. ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್ ಬಿಡುಗಡೆ ಮಾಡಿರುವ ಭ್ರಷ್ಟಾಚಾರ ಗ್ರಹಿಕೆ ಸೂಚ್ಯಂಕವನ್ನು ಇದೇ ಸಂದರ್ಭದಲ್ಲಿ ಉಪ ಲೋಕಾಯುಕ್ತರು ಉಲ್ಲೇಖಿಸಿದರು, 180 ರಾಷ್ಟ್ರಗಳ ಪೈಕಿ ಭಾರತ 91ನೇ ಸ್ಥಾನದಲ್ಲಿದ್ದು, 100ರಲ್ಲಿ 39 ಅಂಕಗಳನ್ನು ಪಡೆದಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಭ್ರಷ್ಟ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಅವರು, ಅಧಿಕಾರಿಗಳನ್ನು ಜನಸೇವೆಗೆ ನೇಮಿಸಲಾಗಿದೆ. ಅವರು ಪ್ರಾಮಾಣಿಕತೆ ಮತ್ತು ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಬೇಕು. ಇಲ್ಲವಾದರೆ ಕ್ರಮ ಕೈಗೊಳ್ಳಬೇಕಾಗುತ್ತದೆ. ಡಾ. ಬಿ.ಆರ್. ಅಂಬೇಡ್ಕರ್ ರಚಿಸಿದ ಸಂವಿಧಾನವು ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಅವಕಾಶ ಕಲ್ಪಿಸುವ ಉದ್ದೇಶ ಹೊಂದಿದೆ ಎಂದರು.
ಇದನ್ನೂ ಓದಿ : ಪೆಟ್ರೋಲ್, ಡಿಸೇಲ್ ಮೇಲಿನ ತೆರಿಗೆ ಕಡಿತ ಮಾಡಲ್ಲ – ಸಿಎಂ ಸಿದ್ದರಾಮಯ್ಯ!









