ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿ ವರ್ಷಗಳೇ ಕಳೆದಿದೆ. ಕಳೆದ ಆಗಸ್ಟ್ ತಿಂಗಳಲ್ಲಿ ಸುಪ್ರೀಂ ಕೋರ್ಟ್ ದರ್ಶನ್ ಸೇರಿದಂತೆ ಇತರ ಆರೋಪಿಗಳಿಗೆ ನೀಡಲಾಗಿದ್ದ ಜಾಮೀನನ್ನು ರದ್ದುಗೊಳಿಸಿತ್ತು. ಇದೀಗ ಸುಪ್ರೀಂಕೋರ್ಟ್ ಮೆಟ್ಟಿಲೇರಿರುವ ನಟ ದರ್ಶನ್ ಜಾಮೀನು ಭವಿಷ್ಯ ಇಂದು ನಿರ್ಧಾರವಾಗಲಿದೆ.
ಈಗಾಗಲೇ ಮೇ 4ರಂದು ಸುಪ್ರೀಂ ಕೋರ್ಟ್‌ನಲ್ಲಿ ದರ್ಶನ್ ಜಾಮೀನು ಅರ್ಜಿಯ ಪ್ರಾಥಮಿಕ ವಿಚಾರಣೆ ನಡೆದಿತ್ತು. ಈ ವೇಳೆ ಪ್ರಕರಣದ ತನಿಖೆ ಮತ್ತು ವಿಚಾರಣೆಯ ಪ್ರಗತಿ ವರದಿಯನ್ನು ಸಲ್ಲಿಸುವಂತೆ ಸೆಷನ್ಸ್ ಕೋರ್ಟ್‌ಗೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು.
ಇಂದಿನ ವಿಚಾರಣೆಯಲ್ಲಿ ಈ ವರದಿ ಮಹತ್ವದ ಪಾತ್ರ ವಹಿಸಲಿದೆ. ದರ್ಶನ್ ಅವರನ್ನು ಜೈಲಿನಿಂದ ಹೊರತರಲು ಅವರ ಪತ್ನಿ ವಿಜಯಲಕ್ಷ್ಮೀ ಅವರು ನಿರಂತರ ಪ್ರಯತ್ನ ನಡೆಸುತ್ತಿದ್ದಾರೆ. ಇಂದು ದರ್ಶನ್‌ಗೆ ಜಾಮೀನು ಸಿಗುತ್ತಾ ಎಂಬ ಕಾತುರದಲ್ಲಿ ದರ್ಶನ್ ಕುಟುಂಬ ಹಾಗೂ ಅಭಿಮಾನಿಗಳಿದ್ದಾರೆ.
ತಮ್ಮ ಜಾಮೀನು ಅರ್ಜಿಯಲ್ಲಿ ದರ್ಶನ್ ಪರ ವಕೀಲರು ಪ್ರಮುಖವಾಗಿ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ವಿಳಂಬವಾಗುತ್ತಿರುವ ಅಂಶವನ್ನು ಪ್ರಸ್ತಾಪಿಸಿದ್ದಾರೆ. ಪ್ರಕರಣದಲ್ಲಿ ಒಟ್ಟು 273 ಸಾಕ್ಷಿಗಳಿದ್ದು, ಈವರೆಗೆ ಕೇವಲ 10 ಮಂದಿಯ ವಿಚಾರಣೆ ಕೂಡ ಪೂರ್ಣಗೊಂಡಿಲ್ಲ. ವಿಚಾರಣೆ ಇಷ್ಟು ನಿಧಾನವಾಗಿ ಸಾಗುತ್ತಿರುವುದರಿಂದ, ತಾವು ಈಗಾಗಲೇ 8 ತಿಂಗಳು ಜೈಲಿನಲ್ಲಿ ಕಳೆದಿದ್ದು, ಶೀಘ್ರವಾಗಿ ಜಾಮೀನು ಮಂಜೂರು ಮಾಡಬೇಕು ಎಂದು ದರ್ಶನ್ ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದಾರೆ.
ಇನ್ನು ಕಾರಾಗೃಹದ ಅವ್ಯವಸ್ಥೆ ಮತ್ತು ಸಹ ಕೈದಿಗಳಿಂದ ಬೆದರಿಕೆ, ಕಿರುಕುಳ ಸೇರಿದಂತೆ ಇನ್ನೂ ಕೆಲವು ಸಮಸ್ಯೆಗಳನ್ನು ದರ್ಶನ್, ಸುಪ್ರೀಂಕೋರ್ಟ್ ಮುಂದೆ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ : ದೇಶದ ಜನತೆಗೆ ಬಿಗ್ ಶಾಕ್ – ಪೆಟ್ರೋಲ್, ಡೀಸೆಲ್ ಬೆಲೆ 3 ರೂ. ಏರಿಕೆ!








