ಉತ್ತರ ಪ್ರದೇಶದಲ್ಲಿ ನಿನ್ನೆ ಭೀಕರ ಬಿರುಗಾಳಿ, ಭಾರೀ ಮಳೆಗೆ ರಾಜ್ಯದಲ್ಲಿ ವ್ಯಾಪಕ ಹಾನಿಯುಂಟಾಗಿದೆ. ಪ್ರಕೃತಿಯ ರೌದ್ರಾವತಾರಕ್ಕೆ ವಿವಿಧ ಜಿಲ್ಲೆಗಳಲ್ಲಿ ಗೋಡೆ ಕುಸಿತ, ಮರಗಳು ಬಿದ್ದಿರುವುದು ಮತ್ತು ಸಿಡಿಲು ಬಡಿದಿದ್ದು, ಈ ಘಟನೆಗಳಲ್ಲಿ ಸುಮಾರು 74 ಮಂದಿ ಮೃತಪಟ್ಟಿದ್ದಾರೆ.
ಭೀಕರ ಮಳೆಗೆ ಪ್ರಯಾಗ್‌ರಾಜ್ ಜಿಲ್ಲೆ ಅತಿ ಹೆಚ್ಚು ಹಾನಿಗೊಳಗಾಗಿದ್ದು, ಅಲ್ಲಿ 17 ಜನರು ಮೃತಪಟ್ಟಿದ್ದಾರೆ. ಮೃತರ ಪೈಕಿ ಐವರು ಮಹಿಳೆಯರು ಮತ್ತು ನಾಲ್ವರು ಮಕ್ಕಳು ಸೇರಿದ್ದಾರೆ. ಉಳಿದಂತೆ ಭದೋಹಿಯಲ್ಲಿ 10, ಫತೇಪುರ್ 8, ಉನ್ನಾವ್ 7, ಬದಾಯೂನ್ 6 ಮತ್ತು ಬರೇಲಿಯಲ್ಲಿ 4 ಜನರು ಸಾವನ್ನಪ್ಪಿದ್ದಾರೆ. ಉನ್ನಾವ್ ಜಿಲ್ಲೆಯ ದಹಿ ಎಂಬಲ್ಲಿ ಮರ ಬಿದ್ದು 70 ವರ್ಷದ ರೈತ ಮೃತಪಟ್ಟರೆ, ಅಸಿವಾನ್‌ನಲ್ಲಿ 9 ವರ್ಷದ ಬಾಲಕ ಬಲಿಯಾಗಿದ್ದಾನೆ.
ಬಿರುಗಾಳಿಯ ಆರ್ಭಟಕ್ಕೆ ನೂರಾರು ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ಅನೇಕ ಜಿಲ್ಲೆಗಳಲ್ಲಿ ವಿದ್ಯುತ್ ಸರಬರಾಜು ಸಂಪೂರ್ಣ ಸ್ಥಗಿತಗೊಂಡಿದೆ. ರಸ್ತೆಗಳ ಮೇಲೆ ಮರಗಳು ಬಿದ್ದಿದ್ದರಿಂದ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿದ್ದು, ಹಲವಾರು ಕಾರುಗಳು ಮತ್ತು ಮನೆಗಳಿಗೆ ಹಾನಿಯಾಗಿದೆ.
ಮುಂದಿನ ಕೆಲವು ಗಂಟೆಗಳಲ್ಲಿ ಲಖನೌ, ಉನ್ನಾವ್, ಸೀತಾಪುರ ಮತ್ತು ಪ್ರಯಾಗ್‌ರಾಜ್ ಸೇರಿದಂತೆ 38 ಜಿಲ್ಲೆಗಳಲ್ಲಿ ಭಾರಿ ಮಳೆ ಮತ್ತು ಸಿಡಿಲು ಸಹಿತ ಬಿರುಗಾಳಿ ಬೀಸುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ.
ಇದನ್ನೂ ಓದಿ : ಇನ್ಫ್ಲುಯೆನ್ಸರ್ ಬ್ಲ್ಯಾಕ್‌ಮೇಲ್ ಕೇಸ್‌ಗೆ ಟ್ವಿಸ್ಟ್ – ಗಂಡನ ಕಾಮಪುರಾಣ ಬಯಲಿಗೆಳೆದ ಪತ್ನಿ!









