ಬೆಂಗಳೂರು : ಬಾಲಿವುಡ್ ನಟ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರು ಬೆಂಗಳೂರಿನ ಪಬ್‌ವೊಂದರಲ್ಲಿ ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತಿಸಿದ್ದ, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆಯನ್ನು ತೀವ್ರಗೊಳಿಸಿದ್ದಾರೆ. ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ, ಕಬ್ಬನ್ ಪಾರ್ಕ್ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.

ಕಬ್ಬನ್ ಪಾರ್ಕ್ ಎಸಿಪಿ ಪ್ರಿಯದರ್ಶಿನಿ ಅವರ ನೇತೃತ್ವದಲ್ಲಿ ವಿಶೇಷ ತನಿಖಾ ತಂಡವು ಪ್ರಕರಣವನ್ನು ಮುಂದುವರೆಸಿದೆ. ಆರ್ಯನ್ ಖಾನ್ ಅವರು ನವೆಂಬರ್ 29ರಂದು ‘ಸೌರ್‌ಬೆರ್ರಿ’ ಪಬ್‌ಗೆ ಅತಿಥಿಯಾಗಿ ಭೇಟಿ ನೀಡಿದ್ದರು. ಈ ಪಬ್ ಓಪನಿಂಗ್ ಕಾರ್ಯಕ್ರಮ ನವೆಂಬರ್ 28ರಂದು ನಡೆದಿತ್ತು. ಆರ್ಯನ್ ಖಾನ್ ಅವರು ಸಾರ್ವಜನಿಕವಾಗಿ ಮಧ್ಯದ ಬೆರಳು ತೋರಿಸುವ ಮೂಲಕ ದುರ್ವರ್ತನೆ ತೋರಿದ್ದಾರೆ ಎಂದು ಆರೋಪಿಸಲಾಗಿದೆ. ತನಿಖಾ ತಂಡವು ತಡರಾತ್ರಿ ಪಬ್‌ಗೆ ಭೇಟಿ ನೀಡಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದೆ. ಪಬ್‌ನ ಮ್ಯಾನೇಜರ್‌ನನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಎಸಿಪಿ ಪ್ರಿಯದರ್ಶಿನಿ ಅವರು ನಿನ್ನೆ ತಡರಾತ್ರಿವರೆಗೂ ವಿಚಾರಣೆಯನ್ನು ಮುಂದುವರೆಸಿದ್ದರು.

ಪೊಲೀಸರು ಸಿಸಿಟಿವಿ ಪರಿಶೀಲನೆ ಮೂಲಕ ಆರ್ಯನ್ ಖಾನ್ ಅವರ ವರ್ತನೆಯ ಬಗ್ಗೆ ಸ್ಪಷ್ಟ ಮಾಹಿತಿ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರು ನಿಜವಾಗಿಯೂ ಸಾರ್ವಜನಿಕವಾಗಿ ಮಧ್ಯದ ಬೆರಳು ತೋರಿಸಿದ್ದಾರೆಯೇ? ಯಾರಿಗೆ ತೋರಿಸಲಾಗಿದೆ? ಮಹಿಳೆಯರಿಗೆ ತೋರಿಸಲಾಗಿದೆಯೇ? ಇದು ಉದ್ದೇಶಪೂರ್ವಕ ವರ್ತನೆಯೇ ಎಂಬುದರ ಬಗ್ಗೆ ಪರಿಶೀಲನೆ ನಡೆಯುತ್ತಿದೆ. ಆರ್ಯನ್ ಖಾನ್ ಯಾವಾಗ ಬಂದರು ಮತ್ತು ಅವರ ಜೊತೆ ಮಾಜಿ ಶಾಸಕ ನಲಪಾಡ್ ಮತ್ತು ನಟ ಝೈದ್ ಖಾನ್ ಬಂದಿದ್ದರು ಎಂಬ ಮಾಹಿತಿಯನ್ನು ಸಹ ಪೊಲೀಸರು ಸಂಗ್ರಹಿಸಿದ್ದಾರೆ.

ಈವರೆಗೂ ಘಟನೆ ಸಂಬಂಧ ಯಾವುದೇ ಅಧಿಕೃತ ದೂರು ದಾಖಲಾಗಿಲ್ಲ. ಆದಾಗ್ಯೂ, ವಿಡಿಯೋ ವೈರಲ್ ಆದ ಕಾರಣ, ಸಾರ್ವಜನಿಕ ಆಕ್ರೋಶದ ಹಿನ್ನೆಲೆಯಲ್ಲಿ ಪೊಲೀಸರು ಸ್ವಯಂಪ್ರೇರಿತರಾಗಿ ತನಿಖೆ ಮುಂದುವರೆಸಿದ್ದಾರೆ.
ಇದನ್ನೂ ಓದಿ : ಸಂಕ್ರಾಂತಿ ಬಳಿಕ ಡಿಕೆ ಶಿವಕುಮಾರ್ಗೆ ಮುಖ್ಯಮಂತ್ರಿ ಪಟ್ಟ – ಬಜೆಟ್ ಮುಗಿದ ಮೇಲೆ ಸಿಎಂ ಆಗ್ತಾರಂತೆ ಡಿಕೆ ಶಿವಕುಮಾರ್!







