ಬೆಂಗಳೂರು–ಮುಂಬೈ ನಡುವಿನ ಪ್ರಯಾಣಿಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು, ಬಹುನಿರೀಕ್ಷಿತ ವಂದೇ ಭಾರತ್ ಸ್ಲೀಪರ್ ರೈಲು ಸೇವೆ ಆರಂಭಕ್ಕೆ ದಿನಾಂಕ ನಿಗದಿಯಾಗಿದೆ.
ಆಗಸ್ಟ್ 1ರಿಂದ ಬೆಂಗಳೂರು–ಮುಂಬೈ ರೈಲಿನ ಸಂಚಾರ ಆರಂಭವಾಗಲಿದೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ತಿಳಿಸಿದ್ದಾರೆ. ಈ ಯೋಜನೆಗೆ ಏಪ್ರಿಲ್ 16ರಂದು ಅನುಮೋದನೆ ಸಿಕ್ಕಿತ್ತು. ಈ ಸ್ಲೀಪರ್ ರೈಲು ಕೆಎಸ್‌ಆರ್ ಬೆಂಗಳೂರು ರೈಲು ನಿಲ್ದಾಣದಿಂದ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (CSMT)ವರೆಗೆ ಸಂಚರಿಸಲಿದ್ದು, ಸೊಲ್ಲಾಪುರ ಮತ್ತು ಕಲಬುರಗಿ ಮಾರ್ಗವಾಗಿ ತೆರಳಲಿದೆ.
ಸಂಜೆ ವೇಳೆಗೆ ಹೊರಡುವ ರೈಲು ಮರುದಿನ ಬೆಳಗ್ಗೆ ಗಮ್ಯಸ್ಥಾನ ತಲುಪುವಂತೆ ವೇಳಾಪಟ್ಟಿ ಇರಲಿದೆ. ಇದೇ ದೂರವನ್ನು ಕ್ರಮಿಸಲು ಉದ್ಯಾನ್ ಎಕ್ಸ್‌ಪ್ರೆಸ್ ಪ್ರಸ್ತುತ 24 ಗಂಟೆಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ.
ವಂದೇ ಭಾರತ್ ಸ್ಲೀಪರ್ ಸೇವೆಯಿಂದ ಪ್ರಯಾಣದ ಈ ಸಮಯ ಸುಮಾರು 15 ಗಂಟೆಗೆ ಇಳಿಕೆಯಾಗುವ ನಿರೀಕ್ಷೆಯಿದೆ. ಈ ರೈಲು 16 ಬೋಗಿಗಳನ್ನು ಹೊಂದಿದ್ದು, ದೀರ್ಘ ದೂರ ಪ್ರಯಾಣಕ್ಕೆಂದೇ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಗರಿಷ್ಠ 180 ಕಿ.ಮೀ ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ವಂದೇ ಭಾರತ್ ಸ್ಲೀಪರ್ ರೈಲಿಗಿದೆ.
ಇದನ್ನೂ ಓದಿ : ರಾಘವ್ ಚಡ್ಡಾ ಸೇರಿ 7 AAP ಸಂಸದರು ಬಿಜೆಪಿಗೆ ಸೇರ್ಪಡೆ – ರಾಜ್ಯಸಭಾ ಅಧ್ಯಕ್ಷರ ಅನುಮೋದನೆ!









