ಐತಿಹಾಸಿಕ ಅಯೋಧ್ಯೆಯಲ್ಲಿ ಧಾರ್ಮಿಕ ಧ್ವಜಾರೋಹಣ – ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ ಹಿನ್ನೆಲೆ ಸಂಭ್ರಮ!

ಅಯೋಧ್ಯೆ : ಐತಿಹಾಸಿಕ ಅಯೋಧ್ಯೆ ನಗರವು ಇಂದು ಮತ್ತೊಂದು ಮಹತ್ವದ ಧಾರ್ಮಿಕ ಮತ್ತು ಸಾಂಸ್ಕೃತಿಕ ಮೈಲಿಗಲ್ಲನ್ನು ಕಂಡಿದೆ. ಸುದೀರ್ಘ ಐದು ವರ್ಷಗಳ ಬಳಿಕ ಶ್ರೀರಾಮ ಜನ್ಮಭೂಮಿಯ ಭವ್ಯ ರಾಮಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ಮಂದಿರದ ಗೋಪುರದ ಮೇಲೆ ಧಾರ್ಮಿಕ ಧ್ವಜಾರೋಹಣ ನೆರವೇರಿಸಿದ್ದಾರೆ. ಗತವೈಭವ ಮರುಕಳಿಸಿದ ಸಂಭ್ರಮದಲ್ಲಿರುವ ಅಯೋಧ್ಯೆಯಲ್ಲಿ ಇಂದು ಬೆಳಿಗ್ಗೆ 11.55 ರಿಂದ ಮಧ್ಯಾಹ್ನ 1 ಗಂಟೆಯ ಶುಭ ಮುಹೂರ್ತದಲ್ಲಿ ಪ್ರಧಾನಿ ಮೋದಿ ಅವರು ಈ ಮಹತ್ವದ ‘ಕೇಸರಿ’ ಧ್ವಜಾರೋಹಣ ನೆರವೇರಿಸಿದರು.

ರಾಮಮಂದಿರದ ಗೋಪುರದ ಮೇಲೆ ಬರೋಬ್ಬರಿ 22 ಅಡಿ ಎತ್ತರದ ತ್ರಿಕೋನ ಕೇಸರಿ ಭಗವಾ ಧ್ವಜವನ್ನು ಸ್ಥಾಪಿಸಲಾಯಿತು. ಈ ತ್ರಿಕೋನ ಕೇಸರಿ ಧ್ವಜವು ಸೂರ್ಯನ ಸಂಕೇತ, ಶಾಶ್ವತ ಶಕ್ತಿ, ದೈವಿಕ ತೇಜಸ್ಸು ಹಾಗೂ ಸದ್ಗುಣ, ಜ್ಞಾನೋದಯ ಮತ್ತು ಶ್ರೀರಾಮನಿಗೆ ಸಂಬಂಧಿಸಿದ ಗುಣಗಳ ಸಮ್ಮಿಲನವನ್ನು ಪ್ರತಿನಿಧಿಸುತ್ತದೆ. ಈ ಐತಿಹಾಸಿಕ ಸಂದರ್ಭಕ್ಕೆ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಸಾಧು-ಸಂತರು, ಗಣ್ಯರು, ಹಿಂದೂ ಸಂಘಟನೆಗಳ ಪ್ರಮುಖ ಮುಖಂಡರು ಮತ್ತು ರಾಮ ಜನ್ಮಭೂಮಿ ಟ್ರಸ್ಟ್‌ನ ಸದಸ್ಯರು ಸೇರಿ ಸಾವಿರಾರು ಮಂದಿ ಸೇರಿದ್ದರು. 2024ರ ಜನವರಿ 22ರಂದು ರಾಮಲಲ್ಲಾ ವಿಗ್ರಹ ಪ್ರತಿಷ್ಠಾಪನೆಗೊಂಡ ನಂತರ, ಇದೀಗ ಅಯೋಧ್ಯೆ ರಾಮಮಂದಿರದ ನಿರ್ಮಾಣ ಕಾರ್ಯವು ಪೂರ್ಣಗೊಂಡಿದ್ದು, ಈ ಧ್ವಜಾರೋಹಣದ ಮೂಲಕ ಅಯೋಧ್ಯೆಯಲ್ಲಿ ಹೊಸ ಧಾರ್ಮಿಕ ಮತ್ತು ಸಾಂಸ್ಕೃತಿಕ ಯುಗಕ್ಕೆ ನಾಂದಿ ಹಾಡಲಾಗಿದೆ.

ಧರ್ಮ ಧ್ವಜಾರೋಹಣದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಯಲ್ಲಿ ಬೃಹತ್ ರೋಡ್ ಶೋ ನಡೆಸಿದರು. ‘ರಾಮ ಪಥ’ದಲ್ಲಿ ನಡೆದ ಈ ರೋಡ್ ಶೋ ವೇಳೆ ಜನಸ್ತೋಮವು ಪ್ರಧಾನಿ ಮೋದಿಯವರನ್ನು ಹರ್ಷೋದ್ಗಾರದಿಂದ ಸ್ವಾಗತಿಸಿತು. ರೋಡ್ ಶೋ ನಂತರ, ಪ್ರಧಾನಿಯವರು ನಗರದ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿದರು. ಅವುಗಳಲ್ಲಿ ಶೇಷಾವತಾರ ಮಂದಿರ, ಸಪ್ತಮಂದಿರ ಮತ್ತು ಮಾತಾ ಅನ್ನಪೂರ್ಣ ಮಂದಿರಗಳು ಪ್ರಮುಖವಾಗಿವೆ.

ಕೊನೆಯಲ್ಲಿ, ಅವರು ಬಾಲರಾಮನ ದರ್ಶನ ಪಡೆದು ರಾಮದರ್ಬಾರ್‌ನಲ್ಲಿ ವಿಶೇಷ ಪೂಜೆ ನೆರವೇರಿಸಿದರು. ಸಂಭ್ರಮದ ಹಿನ್ನೆಲೆಯಲ್ಲಿ ಅಯೋಧ್ಯೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಬಂದೋಬಸ್ತ್ ಮಾಡಲಾಗಿದ್ದು, ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿದೆ.

ಇದನ್ನೂ ಓದಿ : ಕಲರ್‌ಫುಲ್‌ ಹಾಡಿನಲ್ಲಿ ಪ್ರಭಾಸ್‌ ಜಬರ್‌ದಸ್ತ್‌ ಡಾನ್ಸ್‌ – ಜನವರಿ 9ರಂದು ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ!

Btv Kannada
Author: Btv Kannada

Read More