ಅಮೆರಿಕಕ್ಕೆ ಹೋಗಿ ನೆಲೆಸಬೇಕು, ಡಾಲರ್‌ನಲ್ಲಿ ಸಂಪಾದಿಸಬೇಕು ಎಂಬುದು ಭಾರತೀಯರ ದೊಡ್ಡ ಕನಸು. ಆದರೆ ಈಗ ಕಾಲ ಬದಲಾಗುತ್ತಿದೆ. ಅಮೆರಿಕದಲ್ಲಿ ನೆಲೆಸಿರುವ ಭಾರತೀಯರಲ್ಲಿ ಈಗ ಆತಂಕ ಶುರುವಾಗಿದೆ. ಕಾರ್ನೆಗೀ ಎಂಡೋಮೆಂಟ್ ನಡೆಸಿದ ಇತ್ತೀಚಿನ ಸಮೀಕ್ಷೆಯು ಸತ್ಯವೊಂದನ್ನು ಹೊರಹಾಕಿದೆ.
ಅಮೆರಿಕದಲ್ಲಿ ನೆಲೆಸಿರುವ ಸುಮಾರು ಶೇ. 40 ರಷ್ಟು ಭಾರತೀಯರು ಆ ದೇಶವನ್ನು ತೊರೆದು ಸ್ವದೇಶಕ್ಕೆ ಮರಳುವ ಆಲೋಚನೆಯಲ್ಲಿದ್ದಾರೆ. ಭಾರತಕ್ಕೆ ಮರಳಲು ಬಯಸುತ್ತಿರುವವರ ಪೈಕಿ ಶೇ. 58 ರಷ್ಟು ಜನರು ಅಲ್ಲಿನ ಪ್ರಸ್ತುತ ರಾಜಕೀಯ ವಿದ್ಯಮಾನಗಳೇ ಕಾರಣ ಎಂದು ವರದಿಯೊಂದು ಹೇಳಿದೆ.
ಇನ್ನು ಉಳಿದವರು ವೆಚ್ಚ, ಜನರು ಸುರಕ್ಷತೆಗೆ ಉಂಟಾಗಿರುವ ಕಳವಳ ಕಾರಣ ಎಂದು ಹೇಳಿದ್ದಾರೆ. ಜೊತೆಗೆ ಬಹುತೇಕರು ಡೊನಾಲ್ಡ್ ಟ್ರಂಪ್ 2ನೇ ಬಾರಿ ಅಮೆರಿಕ ಅಧ್ಯಕ್ಷರಾಗಿ ಅಧಿಕಾರದ ಚುಕ್ಕಾಣಿ ಹಿಡಿದ ನಂತರ ಅವರು ಕೈಗೊಂಡಿರುವ ನೀತಿಗಳು ಕಾರಣ ಎಂದಿದ್ದಾರೆ.
ತಮ್ಮ ಮಕ್ಕಳನ್ನು ಲಕ್ಷಾಂತರ ರೂಪಾಯಿ ಖರ್ಚು ಮಾಡಿ MS ಅಥವಾ ಉನ್ನತ ವ್ಯಾಸಂಗಕ್ಕಾಗಿ ಅಮೆರಿಕಕ್ಕೆ ಕಳುಹಿಸಲು ಸಿದ್ಧತೆ ನಡೆಸುತ್ತಿರುವ ಪೋಷಕರು ಈ ವರದಿಯನ್ನು ಗಮನಿಸಬೇಕು. ಅಮೆರಿಕದಲ್ಲಿ ಸದ್ಯ 52 ಲಕ್ಷಕ್ಕೂ ಅಧಿಕ ಭಾರತೀಯರಿದ್ದಾರೆ, ಆದರೆ ಅಲ್ಲಿನ ಬದಲಾದ ಪರಿಸ್ಥಿತಿ ಈಗ ಅವರ ಭವಿಷ್ಯದ ಮೇಲೆ ಕರಿನೆರಳು ಬೀರಿದೆ.
ಇದನ್ನೂ ಓದಿ : AAP ತೊರೆದು ಬಿಜೆಪಿ ಸೇರಿದ ಸಂಸದ ರಾಘವ್ ಚಡ್ಡಾ!









