ಸೌದಿ ಅರೇಬಿಯಾದ ಅಲ್ ಮುಫ್ರಿಹಾತ್ ಪ್ರದೇಶದಲ್ಲಿ ನಸುಕಿನ ಜಾವ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ, ಮೆಕ್ಕಾದಿಂದ ಮದೀನಾಗೆ ಪ್ರಯಾಣಿಸುತ್ತಿದ್ದ, ಬಸ್‌ನಲ್ಲಿದ್ದ 42 ಭಾರತೀಯ ಹಜ್ ಯಾತ್ರಿಕರು ಸಜೀವ ದಹನವಾಗಿದ್ದಾರೆ. ಈ ದುರಂತವು ಮಧ್ಯರಾತ್ರಿ ಸುಮಾರು 1.30ರ ವೇಳೆ ನಡೆದಿದೆ.

ವೇಗವಾಗಿ ಬಂದ ಡೀಸೆಲ್ ಟ್ಯಾಂಕರ್ ಒಂದು ಯಾತ್ರಾರ್ಥಿಗಳ ಬಸ್‌ಗೆ ಬಲವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಟ್ಯಾಂಕರ್‌ನಲ್ಲಿದ್ದ ಡೀಸೆಲ್ ಚೆಲ್ಲಿ, ಬಸ್‌ಗೆ ತಕ್ಷಣವೇ ಬೆಂಕಿ ಹೊತ್ತಿಕೊಂಡಿದೆ. ಈ ದುರಂತದಲ್ಲಿ ಬಸ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಬಸ್ಸಿನಲ್ಲಿದ್ದ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 42 ಮಂದಿ ಪ್ರಯಾಣಿಕರು ನಿದ್ದೆಯಲ್ಲಿದ್ದಾಗಲೇ ಬೆಂಕಿಗೆ ಆಹುತಿಯಾಗಿದ್ದಾರೆ.

ಸಜೀವ ದಹನವಾದವರಲ್ಲಿ ಬಹುತೇಕ ಎಲ್ಲರೂ ಹೈದರಾಬಾದ್ ಮೂಲದವರು. ವಾಹನ ಸಂಪೂರ್ಣ ಸುಟ್ಟು ಹೋಗಿರುವ ಕಾರಣ, ಮೃತ ದೇಹಗಳನ್ನು ಗುರುತಿಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಭೀಕರ ದುರಂತಕ್ಕೆ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ತೀವ್ರ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ.

ನವೆಂಬರ್ 9ರಂದು ಹೈದ್ರಾಬಾದ್ನಿಂದ ಮೆಕ್ಕಾಗೆ ಹೊರಟ್ಟಿದ್ದ ಹಜ್ ಯಾತಾರ್ಥಿಗಳ ತಂಡ. ಭಾರತೀಯ ಯಾತಾರ್ಥಿಗಳು ಮೆಕ್ಕಾಗೆ ಹೋಗಿ ವಾಪಸ್ ಬರ್ತಿದ್ದ ವೇಳೆ 42 ಮಂದಿ ಬಸ್ ದುರಂತಕ್ಕೆ ಈಡಗಿ ಸಾವನ್ನಪ್ಪಿದ್ದಾರೆ. ಬಸ್ನಲ್ಲಿ ಇದ 42 ಮಂದಿ ಭಾರತೀಯರು ಸಜೀವದಹನ.

ಸೌದಿ ಅರೇಬಿಯಾದಲ್ಲಿ 42 ಭಾರತೀಯ ಹಜ್ ಯಾತ್ರಿಕರು ಸಜೀವ ದಹನವಾದ ಭೀಕರ ಬಸ್ ದುರಂತದ ನಂತರ, ಭಾರತದ ವಿದೇಶಾಂಗ ಇಲಾಖೆ (MEA) ತಕ್ಷಣ ಕಾರ್ಯಪ್ರವೃತ್ತವಾಗಿದೆ. ಇಲಾಖೆಯು ಸಂಪೂರ್ಣ ಮಾಹಿತಿ ಕಲೆಹಾಕಲು, ಮೃತರನ್ನು ಕರೆದೊಯ್ದಿದ್ದ ಟ್ರಾವೆಲ್ಸ್ ಏಜೆನ್ಸಿಗಳು ಮತ್ತು ಸೌದಿ ಬಸ್ ನಿರ್ವಾಹಕ ಏಜೆನ್ಸಿಯನ್ನು ಸಂಪರ್ಕಿಸಿದೆ. ಯಾತ್ರಿಕರು ಹೈದರಾಬಾದ್‌ನಿಂದ ತೆರಳಿದ್ದರೂ, ಅವರ ನಿಜವಾದ ನಿವಾಸ ಮತ್ತು ಸಂಪೂರ್ಣ ಗುರುತಿನ ದೃಢೀಕರಣ ಅಗತ್ಯವಿದೆ. ಹೀಗಾಗಿ, ವಿದೇಶಾಂಗ ಇಲಾಖೆಯ ಅಧಿಕಾರಿಗಳು ಮೃತಪಟ್ಟಿರುವ 42 ಯಾತ್ರಾರ್ಥಿಗಳ ನಿಖರ ಮಾಹಿತಿ ಮತ್ತು ಗುರುತನ್ನು ಕಲೆ ಹಾಕುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಭಾರತೀಯ ರಾಯಭಾರ ಕಚೇರಿಯ ಮೂಲಕ ಸೌದಿ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಿ, ಶೀಘ್ರದಲ್ಲೇ ಮೃತದೇಹಗಳನ್ನು ಗುರುತಿಸಿ ಭಾರತಕ್ಕೆ ತರುವ ಪ್ರಕ್ರಿಯೆಯನ್ನು ಆರಂಭಿಸಲು ಇಲಾಖೆ ಸಿದ್ಧತೆ ನಡೆಸಿದೆ.
ಇದನ್ನೂ ಓದಿ : ಕಬ್ಬಿನ ಗದ್ದೆಯಲ್ಲಿ ಬೆಳೆದ 6.4 ಲಕ್ಷ ರೂ. ಮೌಲ್ಯದ ಗಾಂಜಾ ಜಪ್ತಿ – ಆರೋಪಿ ಅರೆಸ್ಟ್!







