ಶುಭ್‌ಮನ್ ಗಿಲ್ ಮಾಡಿರೋ ಈ ಕೆಲಸಕ್ಕೆ ಅಮ್ಮಂದಿರು ಬೈಯೋದು ಗ್ಯಾರಂಟಿ – ಅಷ್ಟಕ್ಕೂ ಗಿಲ್ ಮಾಡಿದ್ದೇನು?

ಇತ್ತೀಚೆಗೆ ಟೀಂ ಇಂಡಿಯಾ ಆಟಗಾರ, ಗುಜರಾತ್ ಟೈಟಾನ್ಸ್ ಕ್ಯಾಪ್ಟನ್ ಶುಭ್‌ಮನ್ ಗಿಲ್ ನಮ್ಮ ಅಮ್ಮಂದಿರು ಬೈಯುವಂಥಾ ಕೆಲಸವನ್ನೇ ಮಾಡಿದ್ದಾರೆ.

ಸಾಮಾನ್ಯವಾಗಿ ಕ್ರೀಡಾಪಟುಗಳು ಸುಸ್ತಾದಾಗ ಅಥವಾ ನಿಶ್ಯಕ್ತಿಯಾದಾಗ ಬಾಳೆಹಣ್ಣು ತಿನ್ನುತ್ತಾರೆ. ಇದು ತಕ್ಷಣಕ್ಕೆ ಶಕ್ತಿ ನೀಡುತ್ತದೆ. ಇದೇ ಕಾರಣಕ್ಕೆ ಹಲವು ಕ್ರಿಕೆಟಿಗರು ಪಂದ್ಯದ ಮಧ್ಯೆ ಬಾಳೆಹಣ್ಣು ತಿನ್ನುತ್ತಾರೆ. ಇತ್ತೀಚೆಗೆ ಐಪಿಎಲ್‌ನಲ್ಲಿ ಗುಜರಾತ್ ಕ್ಯಾಪ್ಟನ್ ಗಿಲ್ ಕೂಡ ಇದನ್ನೇ ಮಾಡಿದರು. ಬಾಳೆಹಣ್ಣು ತಿಂದಿದ್ದು ಸರಿ, ಆದರೆ ತಿಂದ ತಕ್ಷಣ ನೀರು ಕುಡಿದಿದ್ದು ಈಗ ಚರ್ಚೆಗೆ ಕಾರಣವಾಗಿದೆ. 

ಇದೇ ಕೆಲಸವನ್ನು ನಾವು ಮಾಡಿದ್ದರೆ, ನಮ್ಮ ತಾಯಂದಿರು ಬೈಯುವುದು ಖಚಿತ. ಬಾಳೆಹಣ್ಣು ತಿಂದ ನಂತರ ನೀರು ಕುಡಿದರೆ ಆರೋಗ್ಯ ಸಮಸ್ಯೆಗಳು ಬರುತ್ತವೆ. ಅದಕ್ಕಾಗಿಯೇ ಹಿರಿಯರು ಹೀಗೆ ಮಾಡಬಾರದು ಎಂದು ಹೇಳುತ್ತಾರೆ. ಬಾಳೆಹಣ್ಣು ತಿಂದ ನಂತರ ನೀರು ಕುಡಿದರೆ ಕೆಲವೊಂದು ಆರೋಗ್ಯ ಸಮಸ್ಯೆಗಳು ಬರುತ್ತವೆ.

ಆರೋಗ್ಯ ಸಮಸ್ಯೆ ಯಾವುದು?

ಜೀರ್ಣಕ್ರಿಯೆ ನಿಧಾನವಾಗುತ್ತೆ : ಬಾಳೆಹಣ್ಣಿನಲ್ಲಿ ಫೈಬರ್ (ನಾರಿನಂಶ) ಹೆಚ್ಚಾಗಿರುತ್ತದೆ. ಬಾಳೆಹಣ್ಣು ತಿಂದ ತಕ್ಷಣ ಹೆಚ್ಚು ನೀರು ಕುಡಿಯುವುದರಿಂದ ಜೀರ್ಣರಸಗಳು ದುರ್ಬಲಗೊಳ್ಳುತ್ತವೆ. ಇದರಿಂದ ಜೀರ್ಣಕ್ರಿಯೆ ನಿಧಾನವಾಗಿ, ಗ್ಯಾಸ್ ಅಥವಾ ಹೊಟ್ಟೆ ಉಬ್ಬರದಂತಹ ಸಮಸ್ಯೆಗಳು ಎದುರಾಗಬಹುದು. 

ಆಯುರ್ವೇದ ಏನು ಹೇಳುತ್ತೆ? : ಆಯುರ್ವೇದದ ಪ್ರಕಾರ, ಬಾಳೆಹಣ್ಣು ದೇಹಕ್ಕೆ ‘ಶೀತ’ (ತಂಪು) ಗುಣವನ್ನು ನೀಡುತ್ತದೆ. ಇದರ ಮೇಲೆ ಮತ್ತೆ ತಣ್ಣೀರು ಕುಡಿಯುವುದರಿಂದ ದೇಹದ ಉಷ್ಣಾಂಶದಲ್ಲಿ ಬದಲಾವಣೆಯಾಗಿ ಶೀತ ಅಥವಾ ಕೆಮ್ಮು ಬರುವ ಸಾಧ್ಯತೆ ಇರುತ್ತದೆ. ಅದಕ್ಕಾಗಿಯೇ ಕನಿಷ್ಠ 20 ರಿಂದ 30 ನಿಮಿಷಗಳ ವಿರಾಮದ ನಂತರ ನೀರು ಕುಡಿಯಲು ಹಿರಿಯರು ಸಲಹೆ ನೀಡುತ್ತಾರೆ. 

ಪೋಷಕಾಂಶಗಳು ದೇಹಕ್ಕೆ ಸೇರುವುದಿಲ್ಲ : ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಮೆಗ್ನೀಶಿಯಂನಂತಹ ಖನಿಜಾಂಶಗಳಿರುತ್ತವೆ. ತಿಂದ ತಕ್ಷಣ ನೀರು ಕುಡಿಯುವುದರಿಂದ ಈ ಪೋಷಕಾಂಶಗಳು ದೇಹಕ್ಕೆ ಸರಿಯಾಗಿ ಸೇರಿಕೊಳ್ಳುವ ಮೊದಲೇ ವಿಸರ್ಜನೆಯಾಗುವ ಸಾಧ್ಯತೆ ಇರುತ್ತದೆ ಎಂದು ಕೆಲವು ತಜ್ಞರು ಅಭಿಪ್ರಾಯಪಡುತ್ತಾರೆ.

ಹೊಟ್ಟೆ ಗಟ್ಟಿಯಾದಂತೆ ಭಾಸವಾಗುತ್ತೆ : ಬಾಳೆಹಣ್ಣಿನಲ್ಲಿರುವ ನಾರಿನಂಶವು ನೀರನ್ನು ಹೀರಿಕೊಂಡು ಹೊಟ್ಟೆಯಲ್ಲಿ ಗಟ್ಟಿಯಾದಂತೆ ಭಾಸವಾಗಬಹುದು. ಇದರಿಂದ ಕೆಲವರಿಗೆ ವಾಕರಿಕೆ ಅಥವಾ ಅಜೀರ್ಣದ ಅನುಭವ ಆಗುತ್ತದೆ.

ಉಸಿರಾಟದ ಸಮಸ್ಯೆ ಇರುವವರು ಎಚ್ಚರ : ಬಾಳೆಹಣ್ಣು ತಿಂದ ನಂತರ ಬಾಯಾರಿಕೆಯಾದರೆ ಒಂದು ಅಥವಾ ಎರಡು ಗುಟುಕು ನೀರು ಕುಡಿಯುವುದರಲ್ಲಿ ತಪ್ಪಿಲ್ಲ. ಆದರೆ ಗ್ಲಾಸ್‌ಗಟ್ಟಲೆ ನೀರು ಕುಡಿಯುವುದನ್ನು ಬಿಡುವುದು ಒಳ್ಳೆಯದು. ಹಾಗೆಯೇ, ರಾತ್ರಿ ವೇಳೆ ಬಾಳೆಹಣ್ಣು ತಿಂದು ತಕ್ಷಣ ನೀರು ಕುಡಿದರೆ ಉಸಿರಾಟ ವ್ಯವಸ್ಥೆಗೆ ತೊಂದರೆಯಾಗಬಹುದು, ಕಫ ಕಟ್ಟಿಕೊಳ್ಳುವ ಅಪಾಯ ಹೆಚ್ಚಾಗಿರುತ್ತದೆ.ಬಾಳೆಹಣ್ಣಿನಲ್ಲಿ ಪೊಟ್ಯಾಶಿಯಂ, ಫೈಬರ್, ವಿಟಮಿನ್‌ಗಳು ಸಮೃದ್ಧವಾಗಿವೆ. ಅದಕ್ಕಾಗಿಯೇ ನಮ್ಮ ತಾಯಂದಿರು ಇದನ್ನು ತಿನ್ನಲು ಹೇಳುತ್ತಾರೆ, ಆದರೆ ತಿಂದ ತಕ್ಷಣ ನೀರು ಕುಡಿಯಬೇಡಿ ಎಂದು ಎಚ್ಚರಿಸುತ್ತಾರೆ. ಜೀರ್ಣ ಸಮಸ್ಯೆ, ಶೀತ, ಕೆಮ್ಮು ಇರುವವರು ಈ ವಿಚಾರದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.

ಇದನ್ನೂ ಓದಿ : ಚಂದನ್ ಶೆಟ್ಟಿ ಅಭಿನಯದ “ಎಲ್ರ ಕಾಲೆಳಿಯತ್ತೆ ಕಾಲ” ಚಿತ್ರ ಏ.17ಕ್ಕೆ ರಿಲೀಸ್!

Btv Kannada
Author: Btv Kannada

Leave a Comment

Read More