ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರಿಗಾಗಿ ಮೀಸಲಾಗಿದ್ದ ಐಪಿಎಲ್ ವಿಐಪಿ ಟಿಕೆಟ್ಗಳು ನಟಿ ಕುಶಿತಾ ಕಲ್ಲಪು ಅವರ ಕೈಸೇರಿವೆ. ನಟಿಯೇ ಈ ಟಿಕೆಟ್ನ ಫೋಟೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಇದು ತೆಲಂಗಾಣ ರಾಜಕೀಯದಲ್ಲಿ ದೊಡ್ಡ ವಿವಾದಕ್ಕೆ ಕಾರಣವಾಗಿದೆ. ಈ ಫೋಟೋ ವೈರಲ್ ಆಗುತ್ತಿದ್ದಂತೆಯೇ, ಪ್ರತಿಪಕ್ಷ BRS ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದೆ.

ಶನಿವಾರ ನಡೆದ ಸನ್ರೈಸರ್ಸ್ ಹೈದರಾಬಾದ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ವಿಐಪಿ ಪಾಸ್ಗಳ ಫೋಟೋವನ್ನು ಅವರು ಇನ್ಸ್ಟಾಗ್ರಾಮ್ ಸ್ಟೋರಿಯಾಗಿ ಪೋಸ್ಟ್ ಮಾಡಿದ್ದರು. ಆ ಟಿಕೆಟ್ ಮೇಲೆ “Complimentary Ticket for Telangana CM” ಎಂದು ಸ್ಪಷ್ಟವಾಗಿ ಬರೆದಿರುವುದು ಕಂಡುಬಂದಿದೆ.
ಸುಮಾರು 40,000 ರೂಪಾಯಿ ಬೆಲೆಬಾಳುವ ‘ಸನ್ರೈಸರ್ಸ್ ಎಲೈಟ್ ಲಾಂಜ್’ ಪಾಸ್ಗಳು ಇವುಗಳಾಗಿದ್ದವು. ಮುಖ್ಯಮಂತ್ರಿಗಳ ಕಚೇರಿಗೆ ಅಧಿಕೃತವಾಗಿ ನೀಡಲಾದ ಈ ಟಿಕೆಟ್ಗಳು ಒಬ್ಬ ನಟಿಯ ಕೈಗೆ ಹೇಗೆ ಸೇರಿದವು ಎಂಬ ಪ್ರಶ್ನೆ ಈಗ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಕೇಳಿಬರುತ್ತಿದೆ.

ವಿವಾದ ದೊಡ್ಡದಾಗುತ್ತಿದ್ದಂತೆಯೇ ನಟಿ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯನ್ನು ಡಿಲೀಟ್ ಮಾಡಿದ್ದರೂ, ಅಷ್ಟರಲ್ಲಾಗಲೇ ಅದರ ಸ್ಕ್ರೀನ್ಶಾಟ್ಗಳು ವೈರಲ್ ಆಗಿದ್ದವು. ಹೈದರಾಬಾದ್ ಕ್ರಿಕೆಟ್ ಅಸೋಸಿಯೇಷನ್ ಮತ್ತು ಸನ್ರೈಸರ್ಸ್ ಮ್ಯಾನೇಜ್ಮೆಂಟ್ ನಡುವೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ಮೊದಲೇ ಭಿನ್ನಾಭಿಪ್ರಾಯಗಳಿದ್ದವು. ಇದರ ನಡುವೆ ಮುಖ್ಯಮಂತ್ರಿಗಳ ಹೆಸರಿನ ಟಿಕೆಟ್ ಹೊರಗೆ ಹೋಗಿರುವುದು ದೊಡ್ಡ ಭದ್ರತಾ ಲೋಪ ಮತ್ತು ಶಿಷ್ಟಾಚಾರದ (Protocol) ಉಲ್ಲಂಘನೆ ಎಂದು ವಿಶ್ಲೇಷಿಸಲಾಗುತ್ತಿದೆ. ಮುಖ್ಯಮಂತ್ರಿಗಳ ಕಚೇರಿಯಿಂದ ಈ ಟಿಕೆಟ್ ಕೈತಪ್ಪಿದೆಯೇ ಅಥವಾ ಇತರ ಉನ್ನತ ಅಧಿಕಾರಿಗಳ ಮೂಲಕ ನಟಿಗೆ ಸಿಕ್ಕಿದೆಯೇ ಎಂಬ ಬಗ್ಗೆ ಇನ್ನೂ ಅಧಿಕೃತ ಸ್ಪಷ್ಟನೆ ಬಂದಿಲ್ಲ. ಈ ಕುರಿತು ಸಮಗ್ರ ತನಿಖೆ ನಡೆಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಇದನ್ನೂ ಓದಿ : ಮಂಗಳೂರು ಕಮಿಷನರ್ ವಿರುದ್ಧ ದೂರು ಕೊಟ್ಟ ಮತ್ತೊಬ್ಬ ಹಿರಿಯ ಅಧಿಕಾರಿ!









