ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ತನ್ನದೇ ಆದ ವಿಶಿಷ್ಟ ಶೈಲಿಯ ಯಶಸ್ಸಿನ ಮೈಲುಗಲ್ಲು ನೆಟ್ಟಿರುವ ಕನ್ನಡದ ಪ್ರಸಿದ್ಧ ಪ್ರತಿಭಾವಂತ ಲವ್ಲಿ ಸ್ಟಾರ್ ಪ್ರೇಮ್. ನಟ ತಮ್ಮ ಸ್ವಂತ ಪರಿಶ್ರಮದಿಂದ ವೈವಿಧ್ಯಮಯ “ಫೀಲ್ ಗುಡ್” ಸಿನಿಮಾಗಳ ( ನೆನಪಿರಲಿ, ಜೊತೆ ಜೊತೆಯಲಿ, ಪಲ್ಲಕ್ಕಿ, ಚಾರ್ ಮಿನಾರ್ , ಮಳೆ ) ಮೂಲಕ ಕನ್ನಡ ಚಿತ್ರರಂಗದಲ್ಲಿ ಯಶಸ್ವಿಯಾಗಿದ್ದಾರೆ. ಇದೀಗ ಲವ್ಲಿ ಸ್ಟಾರ್ ಪ್ರೇಮ್ ಇದೇ ಮೊದಲಬಾರಿಗೆ ಐತಿಹಾಸಿಕ ಸಿನಿಮಾವೊಂದರಲ್ಲಿ ನಾಯಕ ನಟನಾಗಿ ಕಾಣಿಸಿಕೊಳ್ಳುವ ಮೂಲಕ ಕೆರಿಯರ್ನ್ನು ಹೊಸತೊಂದು ಮಜಲಿಗೆ ಕೊಂಡೊಯ್ಯಲು ಸಿದ್ಧತೆ ನಡೆಸಿದ್ದಾರೆ.

2023ರ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದ್ದ, ಪರಿಸರ ಖಾಳಜಿಯ ಜಲಪಾತ ಸಿನಿಮಾ ನಿರ್ಮಿಸಿದ ಶ್ರೀ ಬ್ಯಾನರ್ನ ಅಡಿಯಲ್ಲಿ, ಅದೇ ತಂಡ ಚಿತ್ರಿಸುತ್ತಿರುವ ಈ ಹೊಸ ಸಿನಿಮಾದಲ್ಲೂ ಪರಿಸರ ಅರಿವಿನ ವಿಚಾರಗಳಿದ್ದರೂ ಇದೇ ಮೊದಲಬಾರಿಗೆ ಐತಿಹಾಸಿಕ ಹಿನ್ನೆಲೆಯ ಕಥೆ ಹೊಂದಿರುವುದು ಮತ್ತು ಪೂರ್ತಿ ಮಾಸ್ ಶೈಲಿಯಲ್ಲಿರುವುದು ವಿಶೇಷವಾಗಿದೆ. ಇತಿಹಾಸ ಮತ್ತು ವರ್ತಮಾನಕ್ಕೆ ಕೊಂಡಿ ಬೆಸೆಯುತ್ತಾ ವಿಭಿನ್ನವಾಗಿ ಸಾಗುವ ಈ ಚಿತ್ರ, ಜಾಣಗೆರೆ ವೆಂಕಟರಾಮಯ್ಯ ಅವರ ಕಾದಂಬರಿಯನ್ನು ಆಧರಿಸಿದೆ.
ಪ್ರೇಮ್ ಅವರ ಜನುಮದಿನಕ್ಕೆ ಅವರ ಪಾತ್ರದ ನೋಟವನ್ನು ಹೊಂದಿದ ಬರ್ತ್ಡೇ ಪೋಸ್ಟರ್ ಒಂದನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಈ ಪೋಸ್ಟರ್ನಲ್ಲಿ ಪೂರ್ತಿ ಮಾಸ್ ಲುಕ್ನಲ್ಲಿ ಇರುವ, ತೀವ್ರ ಹರಿತ ನೋಟದಲ್ಲಿ ಇರುವ ಪ್ರೇಮ್ ಕಾಣಸಿಗುತ್ತಾರೆ. ಕೈಯಲ್ಲಿ ಹೊಳೆವ ಮುದ್ರೆಯುಂಗುರ ಮತ್ತು ಹಿರಿದ ಕತ್ತಿ ಅವರ ಕಣ್ಣ ನೋಟಕ್ಕೆ ಮತ್ತಷ್ಟು ಹೊಳಪು ನೀಡಿದೆ. ಹಣೆಯಲ್ಲಿ ಕಂಡೂ ಕಾಣದಂತೆ ಹರಡಿದ ಮುಂಗುರುಳು ಗಾಳಿಯಲ್ಲಿ ಹಾರುತ್ತಾ ಇಡೀ ನಿಲುವಿಗೆ ಮಾಸ್ ಲುಕ್ ನೀಡಿದೆ. ಇತಿಹಾಸ ಪುರುಷರ ಪರಂಪರೆ ಬಿಂಬಿಸುವ ಹೊಳೆವ ತ್ರಿಪುಂಡ್ರ, ಕೇಶ ವಿನ್ಯಾಸ, ಟ್ರೆಂಡಿ ಗಡ್ಡ ಪ್ರೇಮ್ ಅವರನ್ನು ಬೇರೆಯದೆ ಒಂದು ಅವತಾರದಲ್ಲಿ ಕಾಣಿಸುತ್ತಿದೆ.

ಶೃಂಗೇರಿಯ ಪ್ರಸಿದ್ಧ ರಂಗಕರ್ಮಿ, ಯಕ್ಷಗಾನ, ಕಿರುತೆರೆ, ಜಾನಪದ, ಹಿರಿತೆರೆಗಳಂಥ ಬಹು ಮಾಧ್ಯಮದಲ್ಲಿ ತೊಡಗಿಕೊಂಡಿರುವ ರಮೇಶ್ ಬೇಗಾರ್ ಬರವಣಿಗೆ ಜೊತೆಗೆ ಈ ಸಿನಿಮಾ ನಿರ್ದೇಶಿಸಿದ್ದಾರೆ. ಈಗಾಗಲೇ ಈ ಸಿನಿಮಾದ ಪ್ರೇಮ್ ಅವರ ಭಾಗದ ಚಿತ್ರೀಕರಣ ಪೂರ್ಣಗೊಂಡಿದೆ. ಕನ್ನಡದಲ್ಲಿ ಇರುವ ಐತಿಹಾಸಿಕ ಸಿನಿಮಾದ ಕೊರತೆಯನ್ನು ಮೀರುವ ಸ್ಪಷ್ಟ ಲಕ್ಷಣವಿರುವ ಈ ಚಿತ್ರದ ಪೂರ್ತಿವಿವರ ಮತ್ತು ಶೀರ್ಷಿಕೆಯನ್ನು ಒಂದು ಟೀಸರ್ ಮೂಲಕ ಹಂಚಿಕೊಳ್ಳಲಾಗುವುದು ಎಂದು ನಿರ್ದೇಶಕ ರಮೇಶ್ ಬೇಗಾರ್ ತಿಳಿಸಿದ್ದಾರೆ.
ಒಟ್ಟಾರೆ ಜನ್ಮದಿನದ ಸಡಗರ ಕ್ಕೆ ಬಿಡುಗಡೆ ಗೊಂಡಿರುವ ಫಸ್ಟ್ ಲುಕ್ ಪೋಸ್ಟರ್ “ನೆನಪಿರಲಿ ಪ್ರೇಮ್ ಅವರ ನೆನಪಿಡುವ ಪಾತ್ರ” ವೊಂದು ವಿಜೃಂಭಿ ಸುವುದಕ್ಕೆ ತೆರೆ ಮರೆಯಲ್ಲಿ ಸಿದ್ದತೆ ನಡೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಇದನ್ನೂ ಓದಿ : ಇಂದು ಗ್ರೀನ್ ಜೆರ್ಸಿ ಧರಿಸಿ ಕಣಕ್ಕಿಳಿಯಲಿದೆ RCB – ಈ ಜೆರ್ಸಿಯ ವಿಶೇಷತೆಯೇನು?









