ದೆಹಲಿಯ ರಾಜ್ಯಸಭಾ ಸಂಸದರ ಅಪಾರ್ಟ್‌ಮೆಂಟ್‌ಗಳಲ್ಲಿ ಬೆಂಕಿ ಅವಘಡ – ಹಲವರಿಗೆ ಗಾಯ!

ದೆಹಲಿ : ದೆಹಲಿಯ ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ ಎದುರಿನಲ್ಲಿರುವ, ಲೋಕಸಭೆ ಮತ್ತು ರಾಜ್ಯಸಭೆಯ ಸಂಸದರಿಗೆ ಹಂಚಿಕೆ ಮಾಡಲಾಗಿರುವ ಅಪಾರ್ಟ್‌ಮೆಂಟ್ ಸಂಕೀರ್ಣವಾದ ಬ್ರಹ್ಮಪುತ್ರ ಅಪಾರ್ಟ್‌ಮೆಂಟ್ಸ್‌ನಲ್ಲಿಇಂದು ಮಧ್ಯಾಹ್ನ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಬಾಬಾ ಖರಕ್ ಸಿಂಗ್ ಮಾರ್ಗ್‌ನಲ್ಲಿರುವ ಈ ವಸತಿ ಸಮುಚ್ಚಯದಲ್ಲಿ ಮಧ್ಯಾಹ್ನ 1.22ಕ್ಕೆ ಬೆಂಕಿ ಕಾಣಿಸಿಕೊಂಡ ಬಗ್ಗೆ ಮಾಹಿತಿ ಬಂದ ಕೂಡಲೇ, ದೆಹಲಿ ಅಗ್ನಿಶಾಮಕ ದಳವು (DFS) 14 ಅಗ್ನಿಶಾಮಕ ವಾಹನಗಳೊಂದಿಗೆ ಸ್ಥಳಕ್ಕೆ ಧಾವಿಸಿತು. ಸುಮಾರು ಒಂದು ಗಂಟೆಯ ಕಾರ್ಯಾಚರಣೆಯ ನಂತರ 2.10ಕ್ಕೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು.

ಅಗ್ನಿಶಾಮಕ ದಳದ ಅಧಿಕಾರಿಗಳು ಸದ್ಯಕ್ಕೆ ಯಾವುದೇ ಸಾವು-ನೋವು ಸಂಭವಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಆದರೆ, ಅಪಾರ್ಟ್‌ಮೆಂಟ್‌ನ ಕೆಲ ನಿವಾಸಿಗಳು, ಕೆಲವು ಮಕ್ಕಳು ಈ ಘಟನೆಯಲ್ಲಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಆರ್‌ಎಂಎಲ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ. ಈ ಬಗ್ಗೆ ಹೆಚ್ಚಿನ ಅಧಿಕೃತ ದೃಢೀಕರಣ ಬರಬೇಕಿದೆ. ಒಬ್ಬ ನಿವಾಸಿ (ಅನಿಲ್ ಕುಮಾರ್) ಮಾತನಾಡಿ, “ಇಬ್ಬರು ಬಾಲಕಿಯರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ” ಎಂದು ಹೇಳಿದ್ದಾರೆ. ಬೆಂಕಿ ಅವಘಡಕ್ಕೆ ನಿಖರವಾದ ಕಾರಣದ ಬಗ್ಗೆ ದೆಹಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆದರೆ, ಅಪಾರ್ಟ್‌ಮೆಂಟ್‌ ನಿವಾಸಿಗಳು ಮತ್ತು ಸಿಬ್ಬಂದಿ ನೀಡಿದ ಹೇಳಿಕೆಗಳು, ಸ್ಫೋಟಕ ಸತ್ಯವನ್ನು ಹೊರಹಾಕಿವೆ.

ಅಪಾರ್ಟ್‌ಮೆಂಟ್‌ನ ಸ್ಟಿಲ್ಟ್ ಮಹಡಿಯಲ್ಲಿ  ಸಂಗ್ರಹಿಸಲಾಗಿದ್ದ ಕೆಲವು ಸೋಫಾಗಳು ಅಥವಾ ಗೃಹೋಪಯೋಗಿ ವಸ್ತುಗಳ ಮೇಲೆ ಪಟಾಕಿ ಸಿಡಿದು ಬೆಂಕಿ ಹತ್ತಿಕೊಂಡಿದೆ ಎಂದು ಹಲವರು ದೂರಿದ್ದಾರೆ. ಡಿಎಫ್‌ಎಸ್‌ನ ಅಧಿಕಾರಿ ಭೂಪೇಂದ್ರ ಪ್ರಕಾಶ್ ಅವರು, “ನಾವು ತಲುಪಿದಾಗ, ಸ್ಟಿಲ್ಟ್ ಮಹಡಿಯಲ್ಲಿನ ಮನೆಯ ಸಂಗ್ರಹ ವಸ್ತುಗಳಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಜ್ವಾಲೆಗಳು ಮೇಲಕ್ಕೆ ಏರುತ್ತಿದ್ದವು, ಇದು ಮೇಲಿನ ಮಹಡಿಗಳಿಗೆ ಬಾಹ್ಯ ಹಾನಿಯನ್ನುಂಟುಮಾಡಿದೆ,” ಎಂದು ತಿಳಿಸಿದರು.

ಈ ಕಟ್ಟಡವನ್ನು 2020 ರಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದರು. ಕೆಳಗಿನ ಮೂರು ಮಹಡಿಗಳು ಹೆಚ್ಚಾಗಿ ಸಂಸದರ ಸಿಬ್ಬಂದಿಗೆ ವಸತಿ ನೀಡುತ್ತದೆ, ನಾಲ್ಕನೇ ಮಹಡಿಯಿಂದ ಸಂಸದರ ಫ್ಲಾಟ್‌ಗಳು ಆರಂಭವಾಗುತ್ತವೆ. ಈ ದುರಂತದಲ್ಲಿ ಅನೇಕ ಸಿಬ್ಬಂದಿ ತಮ್ಮ ಅಮೂಲ್ಯ ವಸ್ತುಗಳನ್ನು ಕಳೆದುಕೊಂಡಿದ್ದಾರೆ. ಉತ್ತರಾಖಂಡದ ಸಂಸದರ ವೈಯಕ್ತಿಕ ಸಹಾಯಕ  ಕಮಲ್ ಅವರು, “ನಮ್ಮ ಎಲ್ಲಾ ವಸ್ತುಗಳು, ದಾಖಲೆಗಳು, ಒಡವೆಗಳು ಮತ್ತು ಬಟ್ಟೆಗಳು ಸಂಪೂರ್ಣ ನಾಶವಾಗಿವೆ. ನಮ್ಮ ಮೈ ಮೇಲಿರುವ ಬಟ್ಟೆಗಳನ್ನು ಹೊರತುಪಡಿಸಿ ಏನೂ ಉಳಿದಿಲ್ಲ. ನಾವು ಈಗ ಸೊನ್ನೆಯಿಂದ ಪ್ರಾರಂಭಿಸಬೇಕು,” ಎಂದು ಹೇಳಿಕೊಂಡಿದ್ದಾರೆ

ನಿವಾಸಿ ಪೂರ್ಣಿಮಾ ಅವರು, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಸ್ಥಳಕ್ಕೆ ಭೇಟಿ ನೀಡಿ ಕಟ್ಟಡದ ಸುರಕ್ಷತೆಯನ್ನು ಪರಿಶೀಲಿಸಬೇಕು ಮತ್ತು ಸಂತ್ರಸ್ತ ಸಿಬ್ಬಂದಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದು ಮನವಿ ಮಾಡಿದ್ದಾರೆ. ಡಿಎಫ್‌ಎಸ್‌ನ ತ್ವರಿತ ಪ್ರತಿಕ್ರಿಯೆಯಿಂದಾಗಿ ಮೇಲಿನ ಮಹಡಿಗಳಿಗೆ ಹೆಚ್ಚು ಹಾನಿಯಾಗುವುದನ್ನು ತಪ್ಪಿಸಲಾಗಿದೆ.

ಇದನ್ನು ಓದಿ : ಬಾಸಿಲ್ ಜೋಸೆಫ್, ಟೊವಿನೋ ಥಾಮಸ್, ವಿನೀತ್ ಶ್ರೀನಿವಾಸನ್ ನಟನೆಯ’ಅತಿರಡಿ’ – ಚಿತ್ರದ ಟೈಟಲ್ ಟೀಸರ್ ರಿಲೀಸ್!

Btv Kannada
Author: Btv Kannada

Read More