ಮಂಡ್ಯ : ರಾಜ್ಯದಲ್ಲಿ ನಡೆಸುತ್ತಿರುವ ಜಾತಿ ಸಮೀಕ್ಷೆಗೆ ಸರಿಯಾದ ತರಬೇತಿ ನೀಡದ ಕಾರಣ ಸಮೀಕ್ಷೆದಾರರು ಸರಿಯಾದ ಮಾಹಿತಿ ಸಂಗ್ರಹಿಸದ ಕಾರಣ ಸರ್ಕಾರ ಮರು ಜಾತಿ ಸಮೀಕ್ಷೆ ನಡೆಸಲು ಮುಂದಾಗಬೇಕು ಎಂದು ರಾಜ್ಯ ಒಕ್ಕಲಿಗರ ಸಂಘದ ಖಜಾಂಚಿ ನೆಲ್ಲಿಗೆರೆ ಬಾಲು ಆಗ್ರಹಿಸಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಾಲಿ ನಡೆಯುತ್ತಿರುವ ಸಮೀಕ್ಷೆಗೆ ಸಂಬಂಧಿಸಿದಂತೆ ಸಮೀಕ್ಷೆದಾರರಿಗೆ ಸರಿಯಾದ ತರಬೇತಿ ನೀಡದೇ ಗೊಂದಲದ ಗೂಡಾಗಿದೆ. ಒಕ್ಕಲಿಗ ಸಮುದಾಯವನ್ನು ಗುರಿಯಾಗಿಸಿಕೊಂಡು ಈ ಸಮೀಕ್ಷೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು. ಸಮೀಕ್ಷೆದಾರರು ತಪ್ಪು ಮಾಹಿತಿ ನಮೂದಿಸುತ್ತಿರುವುದಾಗಿ ಮಾಧ್ಯಮಗಳಲ್ಲಿ ಕಂಡು ಬಂದಿದೆ. ಅದಲ್ಲದೇ ದೂರವಾಣಿ ಕರೆಯ ಮೂಲಕವೂ ಸಮೀಕ್ಷೆಯ ಸಂಬಂಧ ದೂರುಗಳು ಕೇಳಿಬರುತ್ತಿವೆ. ಸರಕಾರವೂ ಕಡಿಮೆ ಸಮಯ ನಿಗದಿ ಮಾಡಿ, ತುರಾತುರಿಯಲ್ಲಿ ಸಮೀಕ್ಷೆ ಮಾಡುತ್ತಿರುವುದರ ಹಿನ್ನಲೆ ಏನು ಎಂದು ಸಂಶಯ ವ್ಯಕ್ತಪಡಿಸಿದರು.

ತಪ್ಪು ಮಾಹಿತಿ ಸಂಗ್ರಹಿಸುವ ಮೂಲಕ ಒಕ್ಕಲಿಗ ಸಮುದಾಯಕ್ಕೆ ಅನ್ಯಾಯವಾಗುವ ಸಂಭವವಿದೆ. ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿ ಹೋರಾಟ ಮಾಡಿದರೂ ತರಬೇತಿ ಕೊರತೆಯಿಂದ ತಪ್ಪು ಮಾಹಿತಿ ಸಂಗ್ರಹಿಸಲಾಗುತ್ತಿದೆ. ಒಕ್ಕಲಿಗ ಸಮುದಾಯಕ್ಕೆ ನ್ಯಾಯ ಒದಗಿಸಲು ಸಮೀಕ್ಷೆದಾರರಿಗೆ ಸರಿಯಾದ ತರಬೇತಿ ನೀಡಿ ನಂತರ ಮರು ಸಮೀಕ್ಷೆ ನಡೆಸಲು ಮುಂದಾಗಬೇಕು ಒತ್ತಾಯಿಸಿದರು. ಇನ್ನು ಸಮೀಕ್ಷೆಯ ವೇಳೆ ಒಕ್ಕಲಿಗ ಸಮುದಾಯದವರು ಧರ್ಮ ಕಾಲಂನಲ್ಲಿ ಹಿಂದು, ಜಾತಿ ಹಾಗೂ ಉಪಜಾತಿ ಎರಡೂ ಕಾಲಂಗಳಲ್ಲಿ ಒಕ್ಕಲಿಗ ಎಂದು ಮಾತ್ರವೇ ನಮೂದಿಸಲು ಮುಂದಾಗಬೇಕೆಂದು ನೆಲ್ಲಿಗೆರೆ ಬಾಲು ಮನವಿ ಮಾಡಿದರು.
ನಗರಸಭೆ ಅಧ್ಯಕ್ಷ ಎಂ.ವಿ.ಪ್ರಕಾಶ್(ನಾಗೇಶ್) ಮಾತನಾಡಿ, ಸಮೀಕ್ಷೆದಾರರಿಗೆ ಎಲ್ಲಿಯೂ ಸರಿಯಾದ ತರಬೇತಿ ನೀಡಲಾಗಿಲ್ಲ. ತೋಚಿದ ಮಾಹಿತಿ ಸಂಗ್ರಿಸುತ್ತಿದ್ದಾರೆ. ಸಮೀಕ್ಷೆದಾರರಿಗೆ ತರಬೇತಿ ನೀಡಿದ ಮಾಹಿತಿ ನಗರಸಭೆಯ ಅಧ್ಯಕ್ಷನಾಗಿದ್ದ ನನಗೆ ತಿಳಿದಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಮೊದಲು ಜಾತಿ ಸಮೀಕ್ಷೆ ಎಂದು ಹೇಳಿ ಇದೀಗ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಎನ್ನುತ್ತಿದ್ದಾರೆ. ಈ ಸಮೀಕ್ಷೆಯಿಂದ ಒಕ್ಕಲಿಗ ಸಮುದಾಯದಕ್ಕೆ ಅನ್ಯಾಯವಾಗಲಿದೆ. ಸರಕಾರ ಸರಿಯಾದ ತರಬೇತಿ ನೀಡಿ ಮರುಸಮೀಕ್ಷೆಯ ನಿರ್ಧಾರ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಸಿ.ಜೆ.ಗಂಗಾಧರ್, ರಾಘವೇಂದ್ರ, ಜಿಲ್ಲಾಧ್ಯಕ್ಷ ತಿಮ್ಮೇಗೌಡ, ಜಿಲ್ಲಾ ಒಕ್ಕಲಿಗರ ಸಂಘದ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ಜೆ.ತಮ್ಮಯ್ಯ,ಎಲ್. ಕೃಷ್ಣ, ವೇಣುಗೋಪಾಲ್ ಭಾಗಿಯಾಗಿದ್ದರು.
ಇದನ್ನೂ ಓದಿ : ಸುಪ್ರೀಂ CJI ಬಿ. ಆರ್. ಗವಾಯಿ ಮೇಲೆ ಶೂ ಎಸೆಯಲು ಯತ್ನ – ಸನಾತನ ಧರ್ಮಕ್ಕೆ ಅವಮಾನ ಸಹಿಸಲ್ಲ ಎಂದ ವಕೀಲ ಅರೆಸ್ಟ್!







