ಬೆಂಗಳೂರು : MSIL ಸಂಸ್ಥೆಯಲ್ಲಿ ಅಧಿಕಾರಿಗಳು ದಲಿತ ಮಹಿಳೆಗೆ ದೌರ್ಜನ್ಯ ಎಸಗಿರುವ ಗಂಭೀರ ಆರೋಪ ಕೇಳಿಬಂದಿದೆ.

ಕಳೆದ 8 ವರ್ಷಗಳಿಂದ MSIL ಚಿಟ್ ಫಂಡ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯೊಬ್ಬರನ್ನು ನೂರಾರು ಸಿಬ್ಬಂದಿಗಳ ಮುಂದೆಯೇ ಬಟ್ಟೆ ಬಿಚ್ಚಿಸಿ ತಪಾಸಣೆ ಮಾಡುವ ಮೂಲಕ ಮಾನಸಿಕ ಮತ್ತು ಲೈಂಗಿಕ ದೌರ್ಜನ್ಯ ನೀಡಿರುವ ಎಂಬ ಆರೋಪವಿದೆ.


ಪ್ರಕರಣದ ಹಿನ್ನಲೆ?
ಕಳೆದ ಸೆಪ್ಟೆಂಬರ್ 23, 2025 ರಂದು ಈ ಘಟನೆ ನಡೆದಿದ್ದು, ಚೆಕ್ ಬುಕ್ ಕಳೆದುಹೋಗಿದೆ ಎಂದು MSIL ಮೂವರು ಅಧಿಕಾರಿಗಳು ಸುಳ್ಳು ನೆಪ ಹೇಳಿದ್ದು, ವಿಚಾರಣೆ ಹೆಸರಲ್ಲಿ ಮಹಿಳೆಗೆ ಹಿಂಸೆ ಕೊಟ್ಟಿದ್ದಾರೆ.
ದಲಿತ ಮಹಿಳೆ ಎಂಬ ಕಾರಣಕ್ಕೆ ಅವರನ್ನು ಕೆಲಸದಿಂದ ತೆಗೆದುಹಾಕೋಕೆ MSIL ನ ಜನರಲ್ ಮ್ಯಾನೇಜರ್ ಆದ ಚಂದ್ರಶೇಖರ್, ಡೆಪ್ಯುಟಿ ಮ್ಯಾನೇಜರ್ ನಳಿನಿ (DGM), ಮತ್ತು ವೀಣಾ (AGM) ಎಂಬುವವರು ಈ ಸಂಚು ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅಧಿಕಾರಿಗಳ ಆದೇಶದಂತೆ ಸುಮಿತ್ರಾ ಎಂಬ ಸೆಕ್ಯೂರಿಟಿ ಸಿಬ್ಬಂದಿ ಮೂಲಕ ಸಂಸ್ತ್ರಸ್ತೆಯನ್ನು ಕೊಠಡಿಗೆ ಕರೆದೊಯ್ದಿದ್ದು, ಸಂಜೆ 06:00 ಗಂಟೆಗೆ ವಿಚಾರಣೆ ಹೆಸರಿನಲ್ಲಿ ಆರಂಭವಾದ ಈ ಕಿರುಕುಳ ರಾತ್ರಿ 08:00 ಗಂಟೆಯವರೆಗೂ ನಡೆದಿದೆ.
ಚೆಕ್ ಕದ್ದಿದ್ದಾಳೆಂಬ ಆರೋಪದ ಮೇಲೆ ಎಲ್ಲಾ ಸಿಬ್ಬಂದಿಗಳ ಸಮ್ಮುಖದಲ್ಲೇ ಸಂತ್ರಸ್ತೆಯ ಬಟ್ಟೆ ತೆಗೆಸಿ ಅವಮಾನ ಮಾಡಿದ್ದಾರೆ. ಚಂದ್ರಶೇಖರ್ ಮತ್ತು ನಳಿನಿ ಅವರು ಅಟೆಂಡರ್ ರಮೇಶ್ ಹಾಗೂ ಇತರ ಸಹೋದ್ಯೋಗಿಗಳ ಮುಂದೆ ಮಹಿಳೆಗೆ ಅವಮಾನ ಮಾಡಿದ್ದಾರೆ.
ಇನ್ನು ದೂರುದಾರರ ಜಾತಿಯನ್ನು ಹಿಡಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂಬ ಆರೋಪ ಕೇಳಿಬಂದಿದ್ದು, ”ನಾವು ಹೇಳಿದ ಹಾಗೆ ಕೇಳಿದರೆ ಮಾತ್ರ ನಿನ್ನನ್ನು ಕೆಲಸದಲ್ಲಿ ಮುಂದುವರಿಸುತ್ತೇವೆ” ಎಂದು ಬೆದರಿಕೆ ಹಾಕಿರುವ ಆರೋಪವಿದೆ. ಲೈಂಗಿಕ ಕಿರುಕುಳ ಮತ್ತು ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ದೂರಿನಲ್ಲಿ ಸಂತ್ರಸ್ತೆ ಮಹಿಳೆ ಉಲ್ಲೇಖಿಸಿದ್ದಾರೆ. ಸದ್ಯಕ್ಕೆ ಬೆಂಗಳೂರು ಪಶ್ಚಿಮ ಡಿಸಿಆರ್ಇ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಇದನ್ನೂ ಓದಿ : ಜೋಂಬಿ ಡ್ರಗ್ ನಶೆಯಲ್ಲಿ ತೆಲಾಡಿದ ಆರೋಪ – ವೈರಲ್ ವಿಡಿಯೋಗೆ ಸ್ಪಷ್ಟನೆ ಕೊಟ್ಟ ಪೊಲೀಸ್ ಕಮಿಷನರ್!









