ಏಷ್ಯಾಕಪ್‌ಗಾಗಿ ಇಂದು ಭಾರತ- ಪಾಕ್ ನಡುವೆ​ ಹೈವೋಲ್ಟೇಜ್ ಕದನ – 41 ವರ್ಷಗಳ ಇತಿಹಾಸಲ್ಲೇ ಫೈನಲ್‌ನಲ್ಲಿ ಮೊದಲ ಮುಖಾಮುಖಿ!

ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿಯ 41 ವರ್ಷಗಳ ಇತಿಹಾಸದಲ್ಲಿ ಭಾರತ-ಪಾಕಿಸ್ತಾನ ತಂಡಗಳು ಮೊದಲ ಸಲ ಫೈನಲ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಐತಿಹಾಸಿಕ ಪಂದ್ಯದಲ್ಲಿ ಗೆಲುವು ಸಾಧಿಸಿದರೆ ಟೀಂ ಇಂಡಿಯಾ ದಾಖಲೆಯ 9ನೇ ಏಷ್ಯಾಕಪ್ ಪ್ರಶಸ್ತಿಯನ್ನ ಎತ್ತಿ ಹಿಡಿಯಲಿದೆ.

ಇಂದು ರಾತ್ರಿ 8 ಗಂಟೆಗೆ ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಪಂದ್ಯ ಶುರುವಾಗಲಿದೆ. ಹಿಂದಿನ ಎರಡು ಪಂದ್ಯಗಳಲ್ಲಿ ಹೀನಾಯ ಸೋಲು ಕಂಡಿದ್ದ ಪಾಕ್‌ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ. ಇತ್ತ ಭಾರತ ಕೂಡ ಮೂರನೇ ಪಂದ್ಯದಲ್ಲೂ ಮಣ್ಣು ಮುಕ್ಕಿಸಿ ಪಾಕ್‌ ಬಗ್ಗು ಬಡಿಯಲು ಸಜ್ಜಾಗಿದೆ.

ಹ್ಯಾಂಡ್‌ ಶೇಕ್‌ ಇಲ್ಲದೇ, ಮೈದಾನದಲ್ಲಿ ಕಿರಿಕಿರಿಗಳಿಂದ ಕೂಡಿದ್ದ ಹಿಂದಿನ ಎರಡೂ ಪಂದ್ಯಗಳು ಅನೇಕ ವಿವಾದಗಳಿಗೆ ಎಡೆ ಮಾಡಿಕೊಟ್ಟಿದ್ದವು. ಈ ನಡುವೆ ಐಸಿಸಿ ಕೆಲವು ಆಟಗಾರರಿಗೆ ದಂಡವನ್ನೂ ವಿಧಿಸಿ ಎಚ್ಚರಿಸಿತು. ಹೀಗಾಗಿ ಹೀಗಾಗಿ ಮೂರನೇ ಪಂದ್ಯದ ತೀವ್ರತೆ ಜೋರಾಗಿಯೇ ಇದೆ. ಮತ್ತೆ ವಿವಾದಗಳು ಹುಟ್ಟಿಕೊಳ್ಳುವ ಸಾಧ್ಯತೆಗಳೂ ಇವೆ.

ಭಾರತದ ವಿರುದ್ಧ ಸದಾ ಒತ್ತಡದಲ್ಲೇ ಆಡುವ, ಈ ಟೂರ್ನಿಯಲ್ಲೇ ಈವರೆಗೆ ಎರಡು ಸಲ ಸೋತ ಪಾಕಿಸ್ಥಾನಕ್ಕೆ ಇದು ಪ್ರತಿಷ್ಠೆಯ ಫೈನಲ್. ಮತ್ತೊಂದು ಸೋಲನುಭವಿಸಿ ತವರಿಗೆ ತೆರಳಿದ್ರೆ ಅಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ ಎದುರಿಸಬೇಕಾಗುವುದು ನಿಶ್ಚಿತ. ಒಂದೇ ಸರಣಿಯಲ್ಲಿ ಭಾರತದಿಂದ ಮೂರು ಮುಖಭಂಗ ಕಲ್ಪಿಸಿಕೊಳ್ಳಲು ಪಾಕಿಗಳಿಂದ ಖಂಡಿತ ಸಾಧ್ಯವಿಲ್ಲ.

ಈ ಕೂಟದಲ್ಲಿ ಭಾರತದೆದುರು ಪಾಕಿಸ್ತಾನಿಗಳ ಯಾವ ಆಟವೂ ನಡೆಯಲಿಲ್ಲ. ಮೈದಾನದಲ್ಲೂ ಅಷ್ಟೇ, ಮೈದಾನದಾಚೆಯೂ ಅಷ್ಟೇ, ಬಹುಶಃ ಫೈನಲ್‌ನಲ್ಲೂ ಇದಕ್ಕಿಂತ ಭಿನ್ನ ಫಲಿತಾಂಶ ದಾಖಲಾಗಲಿಕ್ಕಿಲ್ಲ ಎಂಬ ದೃಢ ನಂಬಿಕೆ ಭಾರತದ ಕ್ರಿಕೆಟ್ ಅಭಿಮಾನಿಗಳದ್ದಾಗಿದೆ.

ಇದನ್ನೂ ಓದಿ : ದಳಪತಿ ವಿಜಯ್ ರ‍್ಯಾಲಿಯಲ್ಲಿ ಕಾಲ್ತುಳಿತ – ಸಾವಿನ ಸಂಖ್ಯೆ 39ಕ್ಕೆ ಏರಿಕೆ!

Btv Kannada
Author: Btv Kannada

Read More