ಬೆಂಗಳೂರು : ಅಕ್ರಮ ಆಸ್ತಿ ಗಳಿಕೆ ಆರೋಪ ಹಿನ್ನೆಲೆ 8 ಮಂದಿ ಭ್ರಷ್ಟರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು ಕೋಟ್ಯಂತರ ಮೌಲ್ಯದ ಅಕ್ರಮ ಚರಾಸ್ತಿ ಹಾಗೂ ಸ್ಥಿರಾಸ್ತಿಗಳನ್ನು ಪತ್ತೆ ಮಾಡಿದ್ದಾರೆ.
ಮೈಸೂರು, ಬೆಳಗಾವಿ, ಮಂಗಳೂರು, ಚಿತ್ರದುರ್ಗ, ಬಳ್ಳಾರಿ, ಬೀದರ್ ಮತ್ತು ಕೊಡಗಿನಲ್ಲಿ ಅಧಿಕಾರಿಗಳು ಆದಾಯ ಮೀರಿ ಆಸ್ತಿ ಸಂಪಾದಿಸಿರುವ ಆರೋಪದಡಿ ಅಧಿಕಾರಿಗಳ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆಗಳೂ ಸೇರಿದಂತೆ 35 ಕಡೆಗಳಲ್ಲಿ ದಾಳಿ ನಡೆಸಿ 36.92 ಕೋಟಿ ರೂ ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.

ಕೊಡಗು ಜಿಲ್ಲೆಯ ಹಾರಂಗಿ ಅಣೆಕಟ್ಟು ಉಪವಿಭಾಗದಲ್ಲಿ ನಿಯೋಜಿಸಲಾದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಐ ಕೆ ಪುಟ್ಟಸ್ವಾಮಿ ಅವರ ನಿವಾಸ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ನಿಗದಿತ ಆದಾಯಕ್ಕಿಂತ 2.40 ಕೋಟಿ ಅಧಿಕ ಪತ್ತೆಯಾಗಿದೆ. 1.98 ಬಕೋಟಿ ಮೊತ್ತದ ಸ್ಥಿರ ಆಸ್ತಿ, 1.01 ಕೋಟಿ ಮತ್ತದ ಚರಾಸ್ತಿ ಪತ್ತೆಯಾಗಿದೆ.
ಚಿತ್ರದುರ್ಗ ನಿರ್ಮಿತಿ ಕೇಂದ್ರದ ಅಸಿಸ್ಟೆಂಟ್ ಅಕೌಂಟೆಂಟ್ ಸುಶೀಲಮ್ಮ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಸುಶೀಲಮ್ಮರ ಮೆದೇಹಳ್ಳಿ ರಸ್ತೆ ನಿವಾಸ ಹಾಗೂ ಹಿರಿಯೂರಿನ ಯಾರದಕಟ್ಟೆ ತೋಟದ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಒಟ್ಟು 7.90 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಬಳ್ಳಾರಿಯಲ್ಲೂ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ್ದಾರೆ. ಮೀನುಗಾರಿಕ ಇಲಾಖೆ ಸಹಾಯಕ ನಿರ್ದೇಶಕ ಶಿವಣ್ಣ ಮನೆ ಮತ್ತು ಕಚೇರಿ ಮೇಲೆ ದಾಳಿ ಮಾಡಲಾಗಿದೆ. ಬಳ್ಳಾರಿ ನಗರದ ಸಿದ್ಧಾರ್ಥ್ ನಗರದಲ್ಲಿರುವ ಮನೆ ಸೇರಿದಂತೆ ಒಟ್ಟು ನಾಲ್ಕು ಕಡೆ ದಾಳಿ ನಡೆದಿದೆ. ರೇಡ್ ವೇಳೆ 14 ಸೈಟ್, 44 ಎಕರೆ ಜಮೀನು, 600 ಗ್ರಾಂ ಚಿನ್ನ ಹಾಗೂ 8.5 ಲಕ್ಷ ನಗದು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.

ಮಂಗಳೂರು ನಗರದ ಪ್ರಾದೇಶಿಕ ಉಪ ಔಷಧ ನಿಯಂತ್ರಕರ ಕಚೇರಿಯ ಸಹಾಯಕ ಔಷಧ ನಿಯಂತ್ರಕ ಬಾಬು ಬಿ.ಎನ್ ಅವರ ಕಚೇರಿ, ಅವರ ಮನೆಗಳು ಹಾಗೂ ಅವರಿಗೆ ಸಂಬಂಧಿಸಿದ ವಿವಿಧ ಕಟ್ಟಡಗಳ ಮೇಲೆ ಮಂಗಳವಾರ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದು, ಈ ವೇಳೆ ಸ್ಥಿರಾಸ್ತಿ ಹಾಗೂ ಚರಾಸ್ತಿ ಸೇರಿ ಒಟ್ಟು ₹3.37 ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ.

ಮೈಸೂರು ಲೋಕೋಪಯೋಗಿ ಇಲಾಖೆಯ ಎಇ ಜಿ.ಕೆ.ರೇವನ್ ಕುಮಾರ್ ಮನೆಯಲ್ಲಿ ಲೋಕಾಯುಕ್ತ ಪೊಲೀಸರ ದಾಳಿ ವೇಳೆ ₹ 2.96 ಕೋಟಿ ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ. ಅಧಿಕಾರಿಗೆ ಸೇರಿದ ಮಂಡ್ಯದಲ್ಲಿನ 2 ಮನೆ, ಮೈಸೂರಿನ ಕಚೇರಿ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಪರಿಶೀಲನೆ ವೇಳೆ ₹ 2,96,05,185 ಮೌಲ್ಯದ ಚಿನ್ನಾಭರಣ ಪತ್ತೆಯಾಗಿದೆ.
ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ಕೆ.ಆರ್. ಶೋಭಾ ಅವರ ಶಿವಮೊಗ್ಗದ ನಿವಾಸ ಸೇರಿದಂತೆ ಏಳು ಸ್ಥಳಗಳ ಮೇಲೆ ಲೋಕಾಯುಕ್ತ ಪೊಲೀಸರ ಆರು ತಂಡಗಳು ಮಂಗಳವಾರ ದಾಳಿ ನಡೆಸಿದೆ.

ಶಿಕಾರಿಪುರದ ಚನ್ನಕೇಶವನಗರದ 16ನೇ ಕ್ರಾಸ್ನ ಶೋಭಾ ಅವರ ಮನೆ, ಅತ್ತೆಯ ಮನೆ ತರ್ಲಘಟ್ಟ ತಾಂಡಾದಲ್ಲಿನ ಮನೆ, ಫಾರಂ ಹೌಸ್, ಶಿವಮೊಗ್ಗದ ನವುಲೆಯ ಮನೆ, ಬಾಲರಾಜ್ ಅರಸ್ ರಸ್ತೆಯ ಕಚೇರಿ, ಸಾಗರ ತಾಲ್ಲೂಕಿನ ಆನಂದಪುರ ಬಳಿಯ ಆಚಾಪುರದಲ್ಲಿನ ಶಾಲೆ, ಸಹೊದ್ಯೋಗಿ ರಾಘವೇಂದ್ರ ಅವರ ನಿವಾಸಗಳ ಮೇಲೆ ದಾಳಿ ನಡೆದಿದೆ.
ಬೆಳಗಾವಿ ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ (ಎಇಇ) ಅಜಯ್ಸಿಂಗ್ ರಜಪೂತ ಮನೆ ಮೇಲೆ ಮಂಗಳವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, ಅಪಾರ ಪ್ರಮಾಣದ ಚಿನ್ನ ಮತ್ತು ಆಸ್ತಿ ಪತ್ತೆ ಮಾಡಿದ್ದಾರೆ.
498 ಗ್ರಾಂ ಚಿನ್ನಾಭರಣ, ₹6.22 ಲಕ್ಷ ನಗದು, 7 ಪ್ಲಾಟ್ಗಳು, 3 ಮನೆ, 12 ಎಕರೆ ಜಮೀನು, ತಲಾ ಒಂದು ಕಾರು, ದ್ವಿಚಕ್ರ ವಾಹನ ಸೇರಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಗಳಿಕೆ ಮಾಡಿರುವುದು ಪತ್ತೆಯಾಗಿದೆ.








