ಬಳ್ಳಾರಿ : ಲೋಕಾಯುಕ್ತ ಅಧಿಕಾರಿಗಳು ಮೀನುಗಾರಿಕೆ ಇಲಾಖೆಯ ಉಪ ನಿರ್ದೇಶಕ ಶಿವಣ್ಣನ ಮನೆ ಮತ್ತು ಕಚೇರಿಯ ಮೇಲೆ ದಾಳಿ ಮಾಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿರುವ ಅಕ್ರಮದ ಜಾಲವನ್ನು ಅಧಿಕಾರಿಗಳು ಬಯಲಿಗೆಳೆದಿದ್ದಾರೆ.
ರೇಡ್ ವೇಳೆ 14 ಸೈಟ್, 44 ಎಕರೆ ಜಮೀನು, 600 ಗ್ರಾಂ ಚಿನ್ನ ಹಾಗೂ 8.5 ಲಕ್ಷ ನಗದು ಸೇರಿದಂತೆ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಶಿವಣ್ಣ ಕಳೆದ ಹತ್ತು ವರ್ಷಗಳಿಂದ ಒಂದೇ ಕಡೆಯಲ್ಲಿ ಕೆಲಸ ಮಾಡುತ್ತಿದ್ದು, ಅವರ ವಿರುದ್ಧ ಹತ್ತಕ್ಕೂ ಹೆಚ್ಚು ಭ್ರಷ್ಟಾಚಾರದ ದೂರುಗಳು ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿದ್ದವು. ಬಳ್ಳಾರಿ ನಗರದ ಹೊಸಪೇಟೆ ರಸ್ತೆಯಲ್ಲಿರುವ ಅವರ ನಿವಾಸ, ಕಚೇರಿ ಮತ್ತು ಅವರು ಬಳಸುವ ಸರ್ಕಾರಿ ಬೊಲೆರೋ ವಾಹನವನ್ನೂ ಅಧಿಕಾರಿಗಳು ಬಿಡದೆ ತಪಾಸಣೆ ನಡೆಸಿದ್ದಾರೆ. ಸುಮಾರು 12 ಗಂಟೆಗಳ ಸುದೀರ್ಘ ಪರಿಶೀಲನೆಯ ನಂತರ ಕೋಟ್ಯಂತರ ರೂಪಾಯಿ ಮೌಲ್ಯದ ಅಕ್ರಮ ಆಸ್ತಿ ಪತ್ತೆಯಾಗಿದೆ.
ಪತ್ತೆಯಾದ ಅಕ್ರಮ ಆಸ್ತಿಗಳ ವಿವರ
ಜಮೀನು: ವಿವಿಧೆಡೆ ಒಟ್ಟು 44 ಎಕರೆ ಕೃಷಿ ಭೂಮಿ.
ನಿವೇಶನಗಳು: ಬಳ್ಳಾರಿ ನಗರದಲ್ಲಿ 14 ಸೈಟ್‍ಗಳು.
ಮನೆಗಳು: ಬಳ್ಳಾರಿ ನಗರದಲ್ಲೇ 3 ಸುಸಜ್ಜಿತ ಮನೆಗಳು.
ನಗದು: ಮನೆಯಲ್ಲಿ 8.5 ಲಕ್ಷ ರೂ. ನಗದು ಮತ್ತು ಬ್ಯಾಂಕ್ ಖಾತೆಯಲ್ಲಿ 20 ಲಕ್ಷ ರೂ. ಹಣ.
ಚಿನ್ನಾಭರಣ: ಸುಮಾರು 600 ಗ್ರಾಂ ಬಂಗಾರ.
ವಾಹನಗಳು: ಮೂರು ದ್ವಿಚಕ್ರ ವಾಹನಗಳು.
ಇನ್ನೂ ಹಲವು ಬೇನಾಮಿ ಆಸ್ತಿಗಳ ಬಗ್ಗೆ ದಾಖಲೆಗಳು ಸಿಕ್ಕಿದ್ದು, ಲೋಕಾಯುಕ್ತ ತಂಡವು ಹೆಚ್ಚಿನ ತನಿಖೆ ಮುಂದುವರಿಸಿದೆ.
ಇದನ್ನೂ ಓದಿ : ಮೇಜರ್ ಮಣಿವಣ್ಣನ್ ಬಿಡಿಎ ಕಮಿಷನರ್ ಆಗಿ ಬಂದ್ಮೇಲೆ ವ್ಯಾಪಕ ಬದಲಾವಣೆ – IISC ಜಂಟಿ ರಿಜಿಸ್ಟಾರ್ ವೀರಣ್ಣ ಕಮ್ಮಾರ್ ಆಡಿಯೋ ವೈರಲ್!








