ಬೆಂಗಳೂರು : ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಮಾನವ ಹಕ್ಕು ಆಯೋಗದ ಪಾತ್ರ ಅತ್ಯಂತ ದೊಡ್ಡದು. ಆದರೆ ಇದೀಗ ಆಯೋಗದ ಬಹುತೇಕ ಎಲ್ಲಾ ಸಿಬ್ಬಂದಿಯನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಿರುವುದರಿಂದ, ಆಯೋಗವು ಕಾರ್ಯನಿರ್ವಹಿಸಲು ಸಾಧ್ಯವಾಗದ ಸ್ಥಿತಿಗೆ ತಲುಪಿದೆ. ಈ ಬೆಳವಣಿಗೆಯು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ.

ರಾಜ್ಯ ಮಾನವ ಹಕ್ಕು ಆಯೋಗದ ಕಾರ್ಯಚಟುವಟಿಕೆಗಳಿಗೆ ತೀವ್ರ ಅಡ್ಡಿಯಾಗುವ ರೀತಿಯಲ್ಲಿ ಸಿಬ್ಬಂದಿಯನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಿದ್ದು, ಇದೀಗ ಈ ಸಂಬಂಧ ಕಾನೂನುಬದ್ದ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ಗೆ ದೂರು ಕೊಟ್ಟಿದ್ದಾರೆ.

ಆಯೋಗದ ಸಿಬ್ಬಂದಿಯನ್ನು ಜನಗಣತಿ ಕಾರ್ಯದಿಂದ ಮುಕ್ತಗೊಳಿಸಿ ಎಂದು ಆಯೋಗದ ಕಾರ್ಯದರ್ಶಿಗಳು BBMP ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದರು. ಆದರೆ, ಬಿಬಿಎಂಪಿ ಆಯುಕ್ತರು ಈ ಮನವಿಯನ್ನು ಪರಿಗಣಿಸಲಿಲ್ಲ. ಈಗ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕರ್ನಾಟಕ ರಾಜ್ಯ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್ಗೆ ಒತ್ತಾಯಿಸಿದ್ದಾರೆ.

ದೂರಿನಲ್ಲಿ ಏನಿದೆ?
ರಾಜ್ಯ ಮಾನವ ಹಕ್ಕು ಆಯೋಗದ ಕಾರ್ಯಚಟುವಟಿಕೆಗಳಿಗೆ ತೀವ್ರ ಅಡ್ಡಿಯಾಗುವ ರೀತಿಯಲ್ಲಿ ಸಿಬ್ಬಂದಿಯನ್ನು ಜನಗಣತಿ ಕಾರ್ಯಕ್ಕೆ ನಿಯೋಜಿಸಿರುವುದು, ಇದರಿಂದ ಮಾನವ ಹಕ್ಕು ಉಲ್ಲಂಘನೆಗಳ ದೂರುಗಳ ಸ್ವೀಕಾರ, ಪರಿಶೀಲನೆ ಮತ್ತು ವಿಚಾರಣೆ ಪ್ರಕ್ರಿಯೆಗಳಲ್ಲಿ ಗಂಭೀರ ವಿಳಂಬ ಉಂಟಾಗಿ ಸಾರ್ವಜನಿಕರಿಗೆ ನ್ಯಾಯ ದೊರಕುವ ಹಕ್ಕು ಹಾನಿಗೊಳಗಾಗುತ್ತಿರುವ ಹಿನ್ನೆಲೆಯಲ್ಲಿ, ಆಯೋಗದ ಸ್ವಾಯತ್ತತೆ ಮತ್ತು ಕಾರ್ಯಕ್ರಮತೆಯನ್ನು ಕಾಪಾಡಲು ತಕ್ಷಣ ಸಿಬ್ಬಂದಿಯನ್ನು ಮರುನಿಯೋಜಿಸಿ.

ರಾಜ್ಯದಲ್ಲಿ ಮಾನವ ಹಕ್ಕುಗಳ ರಕ್ಷಣೆಗೆ ಸ್ಥಾಪಿತವಾಗಿರುವ ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗವು (State Human Rights Commission) “Protection of Human Rights Act, 1993” ಅಡಿಯಲ್ಲಿ ಪ್ರಮುಖ ಸಂಸ್ಥೆಯಾಗಿದ್ದು, ಇದು ನಾಗರಿಕರ ಮೂಲಭೂತ ಹಕ್ಕುಗಳ ಉಲ್ಲಂಘನೆಗಳ ವಿರುದ್ಧ ತಕ್ಷಣ ಮತ್ತು ಪರಿಣಾಮಕಾರಿಯಾಗಿ ಕ್ರಮ ಕೈಗೊಳ್ಳುವ ಜವಾಬ್ದಾರಿ ಹೊಂದಿದೆ. ಈ ಆಯೋಗವು ಸಿವಿಲ್ ನ್ಯಾಯಾಲಯದ ಅಧಿಕಾರಗಳನ್ನು ಹೊಂದಿದ್ದು, ಪೊಲೀಸ್ ಅತಿರೇಕ. ಅಕ್ರಮ ಬಂಧನ, ಕನ್ನಡಿಯಲ್ಲಿ ಹಿಂಸೆ ಸೇರಿದಂತೆ ಗಂಭೀರ ಪ್ರಕರಣಗಳನ್ನು ವಿಚಾರಣೆ ಮಾಡುವ ಅಧಿಕಾರವನ್ನು ಹೊಂದಿದೆ.

ಆದರೆ, ಇತ್ತೀಚಿನ ಪರಿಸ್ಥಿತಿಯಲ್ಲಿ ಆಯೋಗದ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಜನಗಣತಿ ಕಾರ್ಯಗಳಿಗೆ ನಿಯೋಜಿಸಿರುವುದರಿಂದ ಆಯೋಗದ ದೈನಂದಿನ ಕಾರ್ಯಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಕೇವಲ ಅತಿ ಕಡಿಮೆ ಸಂಖ್ಯೆಯ ಸಿಬ್ಬಂದಿ ಉಳಿದಿರುವುದರಿಂದ, ಹೊಸ ದೂರುಗಳನ್ನು ದಾಖಲಿಸುವುದು, ತುರ್ತು ಪ್ರಕರಣಗಳಲ್ಲಿ ತಕ್ಷಣದ ದಾಳಿ ನಡೆಸುವುದು, ಮತ್ತು ಈಗಾಗಲೇ ಬಾಕಿ ಇರುವ ಗಂಭೀರ ಪ್ರಕರಣಗಳ ವಿಚಾರಣೆ ನಡೆಸುವುದು ಸಾಧ್ಯವಾಗುತ್ತಿಲ್ಲ.
ಈ ಪರಿಸ್ಥಿತಿ ನಾಗರಿಕರ ಮಾನವ ಹಕ್ಕುಗಳ ಮೇಲೆ ನೇರ ಪರಿಣಾಮ ಬೀರುತ್ತಿದ್ದು, ವಿಶೇಷವಾಗಿ ಪೊಲೀಸ್ ಇಲಾಖೆಯ ಅತಿರೇಕ, ಅಕ್ರಮ ಬಂಧನ ಮತ್ತು ಹಿಂಸಾಚಾರದಂತಹ ಪ್ರಕರಣಗಳಲ್ಲಿ ತಕ್ಷಣದ ಹಸ್ತಕ್ಷೇಪ ಅಗತ್ಯವಿರುವ ಸಂದರ್ಭಗಳಲ್ಲಿ, ಆಯೋಗದ ನಿರ್ಜೀವ ಸ್ಥಿತಿ ಕಾನೂನಿನ ಆಡಳಿತಕ್ಕೆ ಗಂಭೀರ ಧಕ್ಕೆಯನ್ನು ಉಂಟುಮಾಡುತ್ತದೆ. ಇದು ಸಂವಿಧಾನದ ವಿಧಿ 21 (ಜೀವನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು) ಹಾಗೂ ವಿಧಿ 14 (ಸಮಾನತೆ ಹಕ್ಕು)ಗಳ ಉಲ್ಲಂಘನೆಗೆ ಕಾರಣವಾಗುವ ಸಾಧ್ಯತೆ ಇದೆ.
ಜನಗಣತಿ ಕಾರ್ಯವು ಮಹತ್ವದ್ದಾಗಿದ್ದರೂ ಸಹ. ಅದಕ್ಕಾಗಿ ಮಾನವ ಹಕ್ಕು ಆಯೋಗದಂತಹ ವಿಶೇಷ ಸಂಸ್ಥೆಗಳ ಸಿಬ್ಬಂದಿಯನ್ನು ಬಳಸಿಕೊಳ್ಳುವುದು ಆಡಳಿತಾತ್ಮಕ ಸಮತೋಲನದ ಕೊರತೆಯನ್ನು ತೋರಿಸುವುದಲ್ಲದೆ, ಪ್ರಾಥಮಿಕತೆಯ ತಪ್ಪು ನಿರ್ಧಾರವನ್ನೂ ಸನೂಚಿಸುತ್ತದ. ಏಕೆಂದರೆ ಮಾನವ ಹಕ್ಕುಗಳ ರಕ್ಷಣೆಯಂತಹ ನಿರಂತರ ಮತ್ತು ತುರ್ತು ಸ್ವಭಾವದ ಕಾರ್ಯಗಳನ್ನು ಯಾವುದೇ ಸಂದರ್ಭದಲ್ಲಿಯೂ ಸ್ಥಗಿತಗೊಳಿಸಲು ಅಥವಾ ದುರ್ಬಲಗೊಳಿಸಲು ಅವಕಾಶ ನೀಡಲಾಗುವುದಿಲ್ಲ.
ಇದಲ್ಲದೆ, ಆಯೋಗದ ಕಾರ್ಯದರ್ಶಿಯವರು ಸಿಬ್ಬಂದಿಯನ್ನು ಜನಗಣತಿ ಕಾರ್ಯದಿಂದ ವಿನಾಯಿತಿ ನೀಡುವಂತೆ ಸಂಬಂಧಿತ ಅಧಿಕಾರಿಗಳಿಗೆ ಬರೆದ ಪತ್ರವನ್ನೂ ಪರಿಗಣಿಸದೇ ಇರುವುದರಿಂದ, ಆಡಳಿತಾತ್ಮಕ ನಿರ್ಲಕ್ಷ್ಯ ಮತ್ತು ಕಾನೂನುಬದ್ಧ ಸಂಸ್ಥೆಗಳ ಸ್ವಾಯತ್ತತೆಯ ಮೇಲಿನ ಹಸ್ತಕ್ಷೇಪ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.














