‘ಗ್ಯಾಂಗ್ಸ್ ಆಫ್‍ ಯುಕೆ’ ಚಿತ್ರದ ಟೀಸರ್ ಬಿಡುಗಡೆ – ಏ.10ಕ್ಕೆ ಚಿತ್ರ ತೆರೆಗೆ!

ರವಿ ಶ್ರೀವತ್ಸ ನಿರ್ದೇಶನದ ‘ಗ್ಯಾಂಗ್ಸ್ ಆಫ್‍ ಯುಕೆ’ ಚಿತ್ರದ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಲಿದೆ. ಚಿತ್ರವು ಏಪ್ರಿಲ್ 10ರಂದು ಬಿಡುಗಡೆಯಾಗುತ್ತಿದ್ದು, ಚಿತ್ರದ ಪ್ರಚಾರ ಕೆಲಸಗಳು ಶುರುವಾಗಿವೆ. ಚಿತ್ರವನ್ನು ಚಂದನ್‍ ಸುರೇಶ್‍ ರಾಜ್ಯಾದ್ಯಂತ ತಮ್ಮ ಚಂದನ್‍ ಫಿಲಂಸ್‍ ಸಂಸ್ಥೆಯ ಮೂಲಕ ಬಿಡುಗಡೆ ಮಾಡುತ್ತಿದ್ದಾರೆ.

ಅದಕ್ಕೂ ಮೊದಲು ಶನಿವಾರ ಸಂಜೆ ಮಲ್ಲೇಶ್ವರದ ಎಸ್‍.ಆರ್.ವಿ ಪ್ರಿವ್ಯೂ ಥಿಯೇಟರ್​ನಲ್ಲಿ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹಿರಿಯ ವಿತರಕ ಸಂಜೀವ ಮೂರ್ತಿ ಟೀಸರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಚಂದನ್‍ ಸುರೇಶ್‍, ನಿರ್ಮಾಪಕರಾದ ‘ಸೂರಪ್ಪ’ ಬಾಬು, ಕೆ. ಮಂಜು ಮುಂತಾದವರು ಹಾಜರಿದ್ದು, ಚಿತ್ರತಂಡಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ರವಿ ಶ್ರೀವತ್ಸ ಈ ಚಿತ್ರ ಕೈಗೆತ್ತಿಕೊಂಡ ಕಾರಣವನ್ನು ವಿವರಿಸಿದರು. ‘ಕಥೆಯಲ್ಲಿ ಇರುವ ಪಾತ್ರಧಾರಿಗಳು ಇವತ್ತಿಗೂ ಜೀವಂತವಾಗಿದ್ದಾರೆ ಮತ್ತು ವ್ಯವಸ್ಥೆಯ ವಿರುದ್ಧ ರೊಚ್ಚಿಗೆದ್ದಿದ್ದಾರೆ. ಸಮಾಜ, ವ್ಯವಸ್ಥೆ ಮತ್ತು ಆರಕ್ಷಕರು ಇವರ್ಯಾರ ಸಹಾಯವಿಲ್ಲದೆ ರಕ್ತಕಣ್ಣೀರು ಹಾಕಿಕೊಂಡು ಸುಮ್ಮನಿದ್ದಾರೆ. ನಮ್ಮನ್ನು ಹೊರಕ್ಕೆ ತರಬೇಡಿ, ನೀವೇನಾದರೂ ಮಾಡಿಕೊಳ್ಳಿ ಎನ್ನುತ್ತಿದ್ದಾರೆ. ಹೇಗೆ ಇದರಲ್ಲಿ ಸಿಕ್ಕಿಕೊಂಡೆ ಎಂದು ಪ್ರಶ್ನಿಸಿದರೆ, ಆ ತಾಯಿ ತನ್ನ ಮಕ್ಕಳನ್ನು ತೋರಿಸಿ ಸುಮ್ಮನಾಗುತ್ತಾಳೆ. ಆ ಮಕ್ಕಳಿಗಾಗಿ ಬದುಕುತ್ತಿದ್ದೇನೆ ಎನ್ನುತ್ತಾಳೆ. ಅವಳಿಗಿಂತ ಇನ್ನೊಬ್ಬ ಹಿರಿಯ ಹೆಣ್ಣು ಇದ್ದಾಳೆ ಮತ್ತು ಅವಳು ತನ್ನ ಕಥೆಯನ್ನು ಈ ಕಥೆಯ ಮೂಲಕ ಹೇಳುತ್ತಾಳೆ’ ಎಂದರು.

‘ಗ್ಯಾಂಗ್ಸ್ ಆಫ್‍ ಯುಕೆ’ ಎಂದರೆ ಹೊಡೆದಾಟ, ಬಡಿದಾಟ, ಗ್ಯಾಂಗ್‍ಸ್ಟರ್​ಗಳು ಇಷ್ಟೇ ಅಲ್ಲ ಎನ್ನುವ ರವಿ ಶ್ರೀವತ್ಸ, ‘ಇದು ತಾಯಿಯ ಕಣ್ಣೀರಿನ ಕಥೆಯಾದರೆ, ಇನ್ನೊಂದರ್ಥದಲ್ಲಿ ಹೆಣ್ಣಿನ ರಕ್ತಕಣ್ಣೀರಿನ ಕಥೆ. ಪ್ರಶಾಂತ್ ಚಿತ್ರದಲ್ಲಿ ಧರ್ಮರಾಯನಂತಿದ್ದವನು, ಪರಶುರಾಮನಾಗುತ್ತಾನೆ. ಇದಕ್ಕೂ ಭೀಮಾತೀರದ ಹಂತಕರ ಕಥೆಗೂ ಸಂಬಂಧವಿಲ್ಲ. ನಮ್ಮಲ್ಲಿ ಕಾಳ, ಅವನ ಮುಗ್ಧ ತಂಗಿ ಕಾಳಿ, ಶಿವಯ್ಯ ಸಾಹುಕಾರ, ಅವನ ಮಾವ ವಿರೂಪಾಕ್ಷ ಸಾಹುಕಾರ, ರುದ್ರೇಶ ಇಂಥ ಪಾತ್ರಗಳಿವೆ. ಒಂದು ಸಣ್ಣ ಗಲಾಟೆಯಿಂದ ಶುರುವಾಗಿ, ಜನ ಹೇಗೆ ಹೋರಾಡುತ್ತಾರೆ ಮತ್ತು ರಕ್ತ ಹೇಗೆ ನಿರಂತರವಾಗಿ ಹರಿಯುತ್ತಾ ಹೋಗುತ್ತದೆ ಎಂದು ತೋರಿಸಿದ್ದೇವೆ. ಇದಕ್ಕೆ ಒಂದಿಷ್ಟು ಜನ ಬಂದು ಸೇರಿಕೊಳ್ಳುತ್ತಾ ಹೋಗುತ್ತಾರೆ. ಏಕೆಂದರೆ, ರಕ್ತ ಬಿಸಿಯಾಗಿರುತ್ತದೆ ಮತ್ತು ರಕ್ತ ತನ್ನದವರದ್ದಾಗಿರುತ್ತದೆ. ಆ ನಿಟ್ಟಿನಲ್ಲಿ ಸಿಕ್ಕ ಆ ಮಣ‍್ಣಿನ ಗಟ್ಟಿತನದ ಕಥೆ ಇದು. ಇದನ್ನು ತೆರೆಯ ಮೇಲೆ ತರಬೇಕು ಎಂದು ಆಸೆಪಟ್ಟು ಚಿತ್ರ ಮಾಡಿದ್ದೇನೆ. ನಾನೊಬ್ಬನೇ ಮಾಡಿದ್ದರೆ ಎಮೋಷನಲ್‍ ಆಗಿ ಇನ್ನಷ್ಟು ಕ್ರೌರ್ಯ ಹೆಚ್ಚಾಗುತ್ತಿತ್ತು. ಬಹುಶಃ ಆಗ ಚಿತ್ರದ ಸೆನ್ಸಾರ್ ಆಗುತ್ತಿರಲಿಲ್ಲವೇನೋ. ಅದೇ ಕಾರಣಕ್ಕೆ ಗುರುಗಳಾದ ಎಂ.ಎಸ್. ರಮೇಶ್‍ ಅವರನ್ನು ಇಟ್ಟುಕೊಂಡು ಹೋದೆ. ಅವರು ಮತ್ತು ಇಡೀ ಚಿತ್ರತಂಡದ ಸಹಕಾರ ಮತ್ತು ಪ್ರೋತ್ಸಾಹದಿಂದ ಚಿತ್ರ ಚೆನ್ನಾಗಿ ರೂಪುಗೊಂಡಿದೆ’ ಎಂದರು.

ಚಿತ್ರಕಥೆ ಮತ್ತು ಸಂಭಾಷಣೆ ಬರೆದಿರುವ ಎಂ.ಎಸ್. ರಮೇಶ್ ಅವರು, ‘ಬಹಳಷ್ಟು ಜನ ಚಿತ್ರದ ಟ್ರೇಲರ್ ನೋಡಿ, ಬಹಳ ಕ್ರೌರ್ಯವಿದೆ ಎಂದರು. ಟ್ರೇಲರ್ ನೋಡಿದವರೆಲ್ಲರೂ ನನಗೆ ಮತ್ತು ರವಿಗೆ ಬೈದಿದ್ದಾರೆ. ಎರಡು ನಿಮಿಷದ ಟ್ರೇಲರ್ ನೋಡಿ, ಎರಡು ಗಂಟೆಯ ಚಿತ್ರದ ಬಗ್ಗೆ ಮಾತನಾಡುವುದು ಕಷ್ಟ. ಜನ ಪ್ರತಿಕ್ರಿಯಿಸಲಿ ಎಂದೇ ನಾವು ಆ ಟ್ರೇಲರ್ ಬಿಟ್ಟಿದ್ದು. ಶಾಂತಿ ಬೇಕು ಎಂದರೆ ಕ್ರಾಂತಿ ಆಗಲೇಬೇಕು ಎನ್ನುವ ಮಾತಿದೆ. ಆ ತಿರುಳು ಈ ಕಥೆಯಲ್ಲಿದೆ. ಎಲ್ಲರೂ ಶಾಂತರಾಗಿರುತ್ತೀವಿ. ಒಂದು ಕ್ಷಣದ ಕೋಪ ಒಂದು ಘಟನೆಗೆ ಕಾರಣವಾದರೆ, ಎಲ್ಲಿಗೆ ಹೋಗಿ ಮುಟ್ಟುತ್ತದೆ ಎಂದು ಚಿತ್ರ ಹೇಳುತ್ತದೆ. ಚಿತ್ರವನ್ನು ನೋಡಿದವರು, ಈಗೇನು ಬಯ್ಯುತ್ತಿದ್ದಾರೆ ಅವರು ಇದರಲ್ಲಿ ಅರ್ಥವಿದೆ ಎಂದು ಹೇಳುತ್ತಾರೆ.

ನಾವು ಯಾವುದೋ ನೆಗೆಟಿವ್‍ ಕಾಮೆಂಟ್‍ಗಳಿಗೆ ಹೆದರುವುದಿಲ್ಲ. ಏಕೆಂದರೆ, ನಮ್ಮ ಸಿನಿಮಾದ ಮೇಲೆ ನಮಗೆ ನಂಬಿಕೆ ಇದೆ. ಆ ನಂಬಿಕೆಗೆ ಬೆಂಬಲ ಕೊಟ್ಟವರು ಸಂಜೀವ ಮೂರ್ತಿ, ಚಂದನ್‍ ಸುರೇಶ್‍, ‘ಸೂರಪ್ಪ’ ಬಾಬು ಮುಂತಾದವರು. ಅವರೆಲ್ಲರೂ ಕ್ರೌರ್ಯ ಜಾಸ್ತಿ ಇದೆ ಎನ್ನುತ್ತಲೇ ಚಿತ್ರ ಚೆನ್ನಾಗಿ ಮೂಡಿಬಂದಿದೆ ಎಂದು ಆತ್ಮವಿಶ್ವಾಸ ತುಂಬಿದರು. ಸಂಜೀವ ಮೂರ್ತಿ ಅವರಂತೂ ಚಿತ್ರ ನೋಡಿ, 20 ವರ್ಷಗಳ ನಂತರ ಕೆ.ವಿ. ರಾಜು ನೆನಪಾದರು ಎಂದರು. ನಾನು ಮತ್ತು ರವಿ ಇಬ್ಬರೂ ಕೆ.ವಿ. ರಾಜು ಅವರ ಶಿಷ್ಯರಾಗಿದ್ದಕ್ಕೂ ಸಾರ್ಥಕ ಎಂದನಿಸಿತು. ಚಿತ್ರದ ಪ್ರಚಾರ ಕೆಲಸ ಶುರುವಾಗಿದ್ದು, ಒಂದೊಂದು ಫೋಟೋ ಮತ್ತು ಕ್ಲಿಪ್ಪಿಂಗ್‍ ಹೊರಬರುತ್ತಿದ್ದಂತೆ ನೆಗೆಟಿವ್‍ ಆದ ಪ್ರತಿಕ್ರಿಯೆಗಳು ಈಗ ಪಾಸಿಟಿವ್‍ ಆಗುತ್ತಿದೆ. ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ, ಇದರ ಮುಂದುವರೆದ ಭಾಗ ಮಾಡಬೇಕೆಂಬ ನಮ್ಮ ಆಸೆ ಮತ್ತೊಮ್ಮೆ ಚಿಗುರಿದೆ. ಈಗಾಗಲೇ ಶೇ. 30ರಷ್ಟು ಮುಂದಿನ ಭಾಗದ ಚಿತ್ರೀಕರಣವಾಗಿದೆ. ಎರಡನೆಯ ಭಾಗ ಮಾಡುವುದಕ್ಕೆ ಯೋಜನೆ ರೂಪುಗೊಳ್ಳುತ್ತಿದೆ. ಪ್ರತಿಕ್ರಿಯೆಗಳಿಂದ ಧೈರ್ಯ ಸಿಕ್ಕಿದ್ದು, ಮುಂದಿನ ದಿನಗಳಲ್ಲಿ ಮುಂದಿನ ಭಾಗ ಸಹ ಬರಲಿದೆ. ಈ ಸಿನಿಮಾಗೆ ಎಲ್ಲರಿಂದ ಒಳ್ಳೆಯ ಬೆಂಬಲ ಸಿಗಲಿದೆ ಎಂಬ ನಂಬಿಕೆ ಇದೆ’ ಎಂದರು.

‘ಗ್ಯಾಂಗ್ಸ್ ಆಫ್‍ ಯುಕೆ’ ಚಿತ್ರವನ್ನು ರವಿ ಶ್ರೀವತ್ಸ, ಡೆಡ್ಲಿ ಆರ್ಟ್ಸ್ ಸಂಸ್ಥೆಯ ಮೂಲಕ ನಿರ್ಮಿಸುತ್ತಿದ್ದಾರೆ. ಚಿತ್ರದಲ್ಲಿ ‘ಒರಟ’ ಪ್ರಶಾಂತ್‍, ಮುನಿ, ಪದ್ಮಾವಾಸಂತಿ, ಸೋನು ಉಪಾಧ್ಯ, ಪ್ರವೀಣ್, ‘ಉಗ್ರಂ’ ರೆಡ್ಡಿ, ಸತ್ಯ, ಧಿಲ್ಲಾನ್, ನವೀನ್, ಪ್ರಜ್ವಲ್ ಮಸ್ಕಿ, ಉಮೇಶ್, ವಿಕಾಸ್, ಅಮೋಘ್‍ ಮುಂತಾದವರು ನಟಿಸಿದ್ದಾರೆ. ಚಿತ್ರಕ್ಕೆ ಆರ್. ಗಿರಿ ಛಾಯಾಗ್ರಹಣವಿದೆ.

Btv Kannada
Author: Btv Kannada

Leave a Comment

Read More

Read More