ಕರ್ನಾಟಕ ಅರಣ್ಯ ಪಡೆಗಳ ಮೊದಲ ಮಹಿಳಾ ಮುಖ್ಯಸ್ಥೆಯಾಗಿ ಮೀನಾಕ್ಷಿ ನೇಗಿ ನೇಮಕ!

ಬೆಂಗಳೂರು : ಕರ್ನಾಟಕ ಅರಣ್ಯ ಪಡೆಗಳ ಮೊದಲ ಮಹಿಳಾ ಮುಖ್ಯಸ್ಥೆಯಾಗಿ ಹಿರಿಯ ಐಎಫ್​ಎಸ್​ ಅಧಿಕಾರಿ ಮೀನಾಕ್ಷಿ ನೇಗಿ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

1989ರ ಬ್ಯಾಚ್​ನ ಕರ್ನಾಟಕ ಕೇಡರ್​ನ ಐಎಫ್​ಎಸ್​ ಅಧಿಕಾರಿಯಾಗಿರುವ ಮೀನಾಕ್ಷಿ ನೇಗಿ ಅವರು ಮೂಲತಃ ಉತ್ತರಾಖಂಡದವರಾಗಿದ್ದು, ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.

ಈಗ ಆ ಸೇವೆಯಿಂದ ಕೇಂದ್ರ ಸರ್ಕಾರ ಅವರನ್ನು ಬಿಡುಗಡೆ ಮಾಡಿದ್ದು, ಇದೀಗ ಕರ್ನಾಟಕದ ಅರಣ್ಯ ಪಡೆಗಳ ಮುಖ್ಯಸ್ಥರಾಗಿ ನೇಮಕ ಮಾಡಲಾಗಿದೆ. ಆ ಮೂಲಕ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ರಾಜ್ಯ ಅರಣ್ಯ ಪಡೆ ಮುಖ್ಯಸ್ಥರಾಗಿ ನೇಮಕಗೊಂಡಿರುವ ಕೀರ್ತಿಗೆ ಪಾತ್ರರಾಗಿದ್ದಾರೆ.

ನೂತನ ಅರಣ್ಯ ಪಡೆ ಮುಖ್ಯಸ್ಥೆಯಾಗಿ ನೇಮಕಗೊಂಡ ಮೀನಾಕ್ಷಿ ನೇಗಿ ಗುರುವಾರ ಅರಣ್ಯ ಸಚಿವ ಈಶ್ವ‌ರ್ ಖಂಡ್ರೆ ಅವರನ್ನು ವಿಕಾಸ ಸೌಧದ ಕಚೇರಿಯಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ಇನ್ನು ಕರ್ನಾಟಕ ಕೇಡರ್​ನ ಅಧಿಕಾರಿಯಾಗಿ ಮೀನಾಕ್ಷಿ ನೇಗಿ ಅವರು 35 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ದಕ್ಷ ಅಧಿಕಾರಿಯೆಂದು ಹೆಸರು ಮಾಡಿರುವ ಮೀನಾಕ್ಷಿ ನೇಗಿ ಬಳ್ಳಾರಿ, ಚಿಕ್ಕಮಗಳೂರು, ಮಂಡ್ಯದಲ್ಲಿ ಡಿಸಿಎಫ್ ಆಗಿ ಕೆಲಸ ಮಾಡಿದ್ದಾರೆ. ಬಳಿಕ ಕೇಂದ್ರ ಸರ್ಕಾರದ ಸೇವೆಗೆ ನಿಯೋಜನೆಗೊಂಡ ಅವರು ಆಯುಷ್ ಇಲಾಖೆಯ ಜಂಟಿ ಕಾರ್ಯದರ್ಶಿಯಾಗಿದ್ದರು. ಕಳೆದ 2 ವರ್ಷಗಳಿಂದ ಅವರು ಕೇಂದ್ರ ಮಹಿಳಾ ಆಯೋಗದ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು.

Btv Kannada
Author: Btv Kannada

Leave a Comment

Read More