ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಫೆ.16ರಂದು 48ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ʼದಾಸʼನ ಬರ್ತ್‌ಡೇಯನ್ನ ಅಭಿಮಾನಿಗಳು ಸಂಭ್ರಮದಿಂದ ಆಚರಿಸಿದ್ದು, ಸ್ಯಾಂಡಲ್ವುಡ್ ತಾರೆಯರು, ವಿವಿಧ ಕ್ಷೇತ್ರದ ಗಣ್ಯರು ತುಂಬು ಹೃದಯದಿಂದ ನಟ ದರ್ಶನ್ಗೆ ಶುಭಾಶಯ ಕೋರಿ, ‘ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ.
ಅಭಿಮಾನಿಗಳು ತೋರಿಸುತ್ತಿರುವ ಪ್ರೀತಿಗೆ ದರ್ಶನ್ ಭಾವುಕರಾಗಿದ್ದು, ಬರ್ತಡೇ ಸಂಭ್ರಮ ಮುಗಿದು ಒಂದು ದಿನದ ಬಳಿಕ, ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಅಭಿಮಾನಿಗಳ ಪ್ರೀತಿ, ಸಹಕಾರ ಸ್ಮರಿಸಿ ಕೃತಜ್ಞತೆ ಸಲ್ಲಿಸಿದ್ದಾರೆ.
ಪ್ರೀತಿಯ ಸೆಲೆಬ್ರಿಟಿಸ್ಗಳೇ.. ನಿಮ್ಮ ಬಗ್ಗೆ ಎಷ್ಟು ಹೇಳಿದರೂ ಕಡಿಮೆ ಎಂದು ಭಾಸವಾಗುತ್ತದೆ. ಕಷ್ಟದಲ್ಲಿದ್ದಾಗ ಸದಾ ಬೆಂಬಲದಲ್ಲಿ ನಿಲ್ಲುವಂತ ಈ ನಿಷ್ಕಲ್ಮಶ ಹೃದಯಗಳಿಗೆ ನಾನು ಸದಾ ಚಿರಋಣಿ.

ನಿಮ್ಮ ಪ್ರೀತಿ-ಪ್ರೋತ್ಸಾಹ ಮತ್ತು ಬೆಂಬಲವೇ ನನ್ನ ಜೀವನದ ನಿಜವಾದ ಆಸ್ತಿ. ನನ್ನ ಹುಟ್ಟುಹಬ್ಬವನ್ನು ವಿಶೇಷವಾಗಿಸುವ ನಿಮ್ಮ ಪ್ರೀತಿಯ ಆಶೀರ್ವಾದಕ್ಕೆ ನಾನು ಮನದಾಳದಿಂದ ಕೃತಜ್ಞನಾಗಿದ್ದೇನೆ.
ನೀವು ಹಲವೆಡೆ ಮಾಡುತ್ತಿರುವ ದಾನ-ಧರ್ಮ ಕಾರ್ಯಗಳು ಸಹಸ್ರಾರು ಹೃದಯಗಳನ್ನು ಸ್ಪರ್ಶಿಸುವಂತಹದ್ದು. ನಿಮ್ಮ ಈ ಕೆಲಸಗಳು ಅನೇಕರಿಗೆ ದಾರಿದೀಪವಾಗಲಿ. ನಿಮ್ಮ ಮನದಾಳದ ಪ್ರೀತಿಯ ಹಾರೈಕೆಗಳು ನನ್ನ ಮುಂದಿನ ಹೆಜ್ಜೆಗೆ ದಾರಿ ತೋರುವ ಬೆಳಕು ಎಂದರೆ ಅತಿಶಯೋಕ್ತಿಯಲ್ಲ. ಆದಷ್ಟು ಬೇಗ ನಿಮ್ಮನ್ನು ಕಾಣುವ ಹಂಬಲ, ಕಾತುರ ನನ್ನಲಿಯೂ ಇದೆ. ನಿಮ್ಮನ್ನು ಪಡೆದಿರುವ ನಾನೇ ಧನ್ಯ.. ಎಂದು ಸೋಷಿಯಲ್ ಮೀಡಿಯಾದಲ್ಲಿ ನಟ ದರ್ಶನ್ ಬರೆದುಕೊಂಡಿದ್ದಾರೆ.









