ಪಡ್ಡೆಹುಲಿ ಖ್ಯಾತಿಯ ನಟ ಶ್ರೇಯಸ್ ಮಂಜು, ಕಣ್ಸನ್ನೆ ಚೆಲುವೆ ಪ್ರಿಯಾ ವಾರಿಯರ್ ಅಭಿನಯದ ‘ವಿಷ್ಣುಪ್ರಿಯಾ’ ಚಿತ್ರ ಇದೇ ಶುಕ್ರವಾರ ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗುತ್ತಿದೆ. ಈಗಾಗಲೇ ಚಿತ್ರದ ಪ್ರಚಾರವೂ ಭರ್ಜರಿಯಾಗಿ ನಡೆಯುತ್ತಿದೆ.

90ರ ದಶಕದಲ್ಲಿ ನಡೆದಂಥ ಇಂಟೆನ್ಸ್ ಲವ್ ಸ್ಟೋರಿ ಈ ಚಿತ್ರದಲ್ಲಿದೆ. ಬಿಂದ್ಯಾ ಮೂವೀಸ್ ಕೆ. ಮಂಜು ಸಿನಿಮಾಸ್ ಮೂಲಕ ಈ ಚಿತ್ರವನ್ನು ಡಾ. ಕೆ.ಮಂಜು ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಇದು ಮಂಜು ಬ್ಯಾನರ್ನಲ್ಲಿ ನಿರ್ಮಾಣವಾಗಿರುವ 50ನೇ ಚಿತ್ರ ಎನ್ನುವುದು ವಿಶೇಷ.

ಫೆ.21ರಂದು ರಾಜ್ಯಾದ್ಯಂತ ತೆರೆ ಕಾಣಲಿರುವ ಈ ಚಿತ್ರಕ್ಕೆ ಮಲಯಾಳಂ ನಿರ್ದೇಶಕ ವಿ.ಕೆ.ಪ್ರಕಾಶ್ ಕಥೆ ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ. ಚಿತ್ರದ ನಾಯಕನ ಹೆಸರು ವಿಷ್ಣು, ನಾಯಕಿಯ ಹೆಸರು ಪ್ರಿಯಾ. ಅವರಿಬ್ಬರ ಹೆಸರೇ ಚಿತ್ರದ ಶೀರ್ಷಿಕೆಯಾಗಿದೆ. ಜೀವನದಲ್ಲಿ ಪ್ರೀತಿ ಅನ್ನೋದು ಎಷ್ಟು ಮುಖ್ಯ ಅಂತ ಈ ಚಿತ್ರದಲ್ಲಿ ತೋರಿಸಲಾಗಿದೆ.

ಇನ್ನು ತೆಲುಗಿನ ಸಂಗೀತ ನಿರ್ದೇಶಕ ಗೋಪಿಸುಂದರ್ ಈ ಚಿತ್ರಕ್ಕೆ ಮ್ಯೂಸಿಕ್ ಕಂಪೋಜ್ ಮಾಡಿದ್ದಾರೆ. ಫ್ಯಾಮಿಲಿ ವ್ಯಾಲ್ಯೂಸ್‌ಗೆ ಹೆಚ್ಚಿನ ಮಹತ್ವವಿದ್ದು, ಪ್ರೀತಿಗಾಗಿ ಏನು ಬೇಕಾದರೂ ಮಾಡಲು ರೆಡಿಯಾಗುವ ಯುವಕನ ಜೀವನದಲ್ಲಿ ಏನೇನೆಲ್ಲ ಆಗಿಹೋಯಿತು ಎಂದು ಈ ಚಿತ್ರ ಹೇಳುತ್ತದೆ.
ನಾಯಕನ ತಂದೆಯಾಗಿ ಅಚ್ಯುತ್ ಕುಮಾರ್ ಹಾಗೂ ನಾಯಕಿಯ ತಂದೆಯಾಗಿ ಸುಚೇಂದ್ರ ಪ್ರಸಾದ್ ಅವರು ಅಭಿನಯಿಸಿದ್ದಾರೆ. ನಿರ್ದೇಶಕ ರವಿ ಶ್ರೀವತ್ಸ ಚಿತ್ರಕಥೆ ಹಾಗೂ ಸಂಭಾಷಣೆಗಳನ್ನು ಬರೆದಿದ್ದಾರೆ. ವಿನೋದ್ ಭಾರತಿ ಅವರ ಛಾಯಾಗ್ರಹಣ, ಸುರೇಶ್ ಅರಸ್ ಅವರ ಸಂಕಲನ ಈ ಚಿತ್ರಕ್ಕಿದೆ.









