ಬೆಂಗಳೂರು : ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಭಾರೀ ಬಿಸಿಲಿನ ತಾಪಕ್ಕೆ ಅಂತರ್ಜಲ ಮಟ್ಟ ಕುಸಿತವಾಗಿದ್ದು, ಬೋರ್‌ವೆಲ್‌ಗಳು ಬತ್ತಿ ಹೋಗುತ್ತಿವೆ. ಇದರಿಂದ ಬೆಂಗಳೂರಿನ ಜನತೆಗೆ ಜಲಗಂಡಾಂತರ ಕಾದಿರುವ ಮುನ್ಸೂಚನೆ ಲಭ್ಯವಾಗಿದ್ದು, ಕಾವೇರಿ ನೀರಿಗೆ ಭಾರೀ ಬೇಡಿಕೆ ಬರುವ ಸನ್ನಿವೇಶ ಕಂಡುಬರುತ್ತಿದೆ.
ಆದ್ದರಿಂದ ಪ್ರಾರಂಭದ ಹಂತದಲ್ಲೇ ಬೆಂಗಳೂರು ನೀರು ಸಬರಾಜು ಮತ್ತು ಒಳ ಚರಂಡಿ ಮಂಡಳಿ (BWSSB) ಈ 6 ಕಾರ್ಯಗಳಿಗೆ ಕಾವೇರಿ ಕುಡಿಯುವ ನೀರು ಬಳಕೆ ಮಾಡದಂತೆ ನಿಷೇಧ ಹೇರಿ ಆದೇಶ ಹೊರಡಿಸಿದೆ. ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದಲ್ಲಿ 5,000 ರೂ. ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದೆ.
ಬೆಂಗಳೂರು ಮಹಾನಗರದಲ್ಲಿ ಖಾಯಂ ವಾಸಿಗಳು ಹಾಗೂ ಬಂದು ಹೋಗುವವರನ್ನು ಸೇರಿಸಿ ಸುಮಾರು 1 ಕೋಟಿ 40 ಲಕ್ಷ ಜನಸಂಖ್ಯೆಯನ್ನು ಗುರುತಿಸಲಾಗಿದೆ. ಎಲ್ಲರಿಗೂ ಕುಡಿಯುವ ನೀರನ್ನು ಪೂರೈಕೆ ಮಾಡುವುದು ಅವಶ್ಯವಾಗಿರುತ್ತದೆ. ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದ್ದು, ಬೆಂಗಳೂರು ನಗರದಲ್ಲಿ ನೀರನ್ನು ಪೋಲು ಮಾಡುವುದನ್ನು ತಡೆಗಟ್ಟಲು ಅವಶ್ಯವೆಂದು ಮನಗಂಡು ಕುಡಿಯುವ ನೀರನ್ನು ಸಾರ್ವಜನಿಕರು ಮಿತವಾಗಿ ಬಳಸುವಂತೆ ಅಗತ್ಯಪಡಿಸಲಾಗಿದೆ. ಈ ಹಿನ್ನಲೆಯಲ್ಲಿ ಸಾರ್ವಜನಿಕ ಹಿತದೃಷ್ಠಿಯಿಂದ ಈ ಕೆಳಕಂಡಂತೆ ಆದೇಶಿಸಿದೆ.
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34ರ ಅನುಸಾರ ಬೆಂಗಳೂರು ನಗರದಲ್ಲಿ ಕುಡಿಯುವ ನೀರನ್ನು ಈ ಕೆಳಕಂಡ ಉದ್ದೇಶಗಳಿಗೆ ಬಳಸಲು ನೀಷೇಧಿಸಲಾಗಿದೆ.
- ವಾಹನ ಸ್ವಚ್ಛತೆಗೆ ಬಳಸುವಂತಿಲ್ಲ
- ಕೈದೋಟಕ್ಕೆ ಬಳಸುವಂತಿಲ್ಲ
- ಕಟ್ಟಡ ನಿರ್ಮಾಣಕ್ಕೆ ಬಳಸುವಂತಿಲ್ಲ
- ಮನರಂಜನೆ ಉದ್ದೇಶದಿಂದ ಕಾರಂಜಿ ಅಂತಹ ವ್ಯವಸ್ಥೆಗೆ ಬಳಸುವಂತಿಲ್ಲ
- ಸಿನಿಮಾ ಮಂದಿರ, ಮಾಲ್‌ಗಳಲ್ಲಿ ಕುಡಿಯುವುದಕ್ಕೆ ಹೊರತು ಪಡಿಸಿ ಬೇರೆಯದಕ್ಕೆ ಬಳಸುವಂತಿಲ್ಲ
- ರಸ್ತೆ ನಿರ್ಮಾಣಕ್ಕೆ ಮತ್ತು ಸ್ವಚ್ಚತೆಗೆ ಬಳಸುವಂತಿಲ್ಲ
ಈ ನಿಯಮವನ್ನು ಉಲ್ಲಂಘನೆ ಮಾಡುವವರ ವಿರುದ್ಧ ಜಲಮಂಡಳಿಯ ಕಾಯ್ದೆ 1964ರ ಕಲಂ 109ರಂತೆ 5000 ಸಾವಿರ ರೂಪಾಯಿ ದಂಡ ವಿಧಿಸಲಾಗುವುದು. ಈ ಉಲ್ಲಂಘನೆಯು ಮತ್ತೆ ಮಾಡಿದರೆ ದಂಡ ಮೊತ್ತ 5000 ಜೊತೆಗೆ ಹೆಚ್ಚುವರಿಯಾಗಿ 500 ರೂಪಾಯಿಯಂತೆ ಪ್ರತಿದಿನದಂತೆ ದಂಡ ಹಾಕಲಾಗುವುದು ಎಂದು ಜಲಮಂಡಳಿ ಎಚ್ಚರಿಕೆ ನೀಡಿದೆ.
ಇನ್ನು ಸಾರ್ವಜನಿಕರು ಯಾರಾದರು ಈ ನಿಯಮವನ್ನು ಉಲ್ಲಂಘನೆ ಮಾಡುವುದು ಕಂಡುಬಂದಲ್ಲಿ ಕೂಡಲೇ ಮಂಡಳಿಯ ಕಾಲ್ ಸೆಂಟರ್ ಸಂಖ್ಯೆ : 1916ಗೆ ತಿಳಿಸಬಹುದಾಗಿದೆ ಎಂದೂ ಜಲಮಂಡಳಿಯ ಪ್ರಕಟಣೆಯಲ್ಲಿ ತಿಳಿಸಿದೆ.









