2 ವಾರಗಳ ವಿಶ್ರಾಂತಿ ಬಳಿಕ ಇಂದು ವಿಧಾನಸೌಧಕ್ಕೆ ಸಿಎಂ ಸಿದ್ದರಾಮಯ್ಯ ಎಂಟ್ರಿ!

ಬೆಂಗಳೂರು : ಮಂಡಿ ನೋವಿನ ಹಿನ್ನೆಲೆ 2 ವಾರಗಳ ವಿಶ್ರಾಂತಿ ಬಳಿಕ ಸಿಎಂ ಸಿದ್ದರಾಮಯ್ಯನವರು ಇಂದು ಕ್ಷೇತ್ರ ಕಾರ್ಯಕ್ಕೆ ಇಳಿಯುತ್ತಿದ್ದು, ಬೆಳಗ್ಗೆ 11 ಗಂಟೆಗೆ ವಿಧಾನಸೌಧ ಸಮ್ಮೇಳನ ಸಭಾಂಗಣದಲ್ಲಿ 2025-26ನೇ ಸಾಲಿನ ಬಜೆಟ್ ಪೂರ್ವಭಾವಿ ಸಭೆ ನಡೆಸಲಿದ್ದಾರೆ. ಈಗಾಗಲೇ ಬಹುತೇಕ ಇಲಾಖೆಗಳೊಂದಿಗೆ ಚರ್ಚೆ ಮುಗಿಸಿರುವ ಸಿಎಂ, ಇಂದು ರೈತ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಮತ್ತು ರೈತ ಮುಖಂಡರೊಂದಿಗೆ ವಿಚಾರ ವಿನಿಮಯ ಮಾಡಲಿದ್ದಾರೆ.

ಸಿಎಂಗೆ ಮಂಡಿ ನೋವು ಕಾಣಿಸಿಕೊಂಡಿದ್ದೇಗೆ? ಜ.30ರಂದು ಸಿಎಂ ಸಿದ್ದರಾಮಯ್ಯನವರ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಸಭೆ ನಡೆದಿತ್ತು. ಮರುದಿನ ಬೆಂಗಳೂರಿನ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಸಿಎಂ, ಫೆ.1ರಂದು ತವರು ಜಿಲ್ಲೆ ಮೈಸೂರು, ಕೊಡಗು ಪ್ರವಾಸ ಮಾಡಿ ಬೆಂಗಳೂರಿಗೆ ವಾಪಸ್​ ಆಗಿದ್ದರು. ಫೆ.2ರಂದು ಬೆಳಗ್ಗೆ ಮನೆಯಲ್ಲಿ ಸ್ನಾನ ಮಾಡುವಾಗ ಕಾಲು ಜಾರಿ, ಎಡಗಾಲಿನ ಮೊಣಕಾಲಿಗೆ ಬಲವಾದ ಗಾಯವಾಗಿತ್ತು. ಚಿಕಿತ್ಸೆಗೆಂದು ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿ ತಪಾಸಣೆಗೆ ಒಳಗಾಗಿದ್ದರು.

ಇನ್ನು ಮಂಡಿ ಶಸ್ತ್ರಚಿಕಿತ್ಸೆ ನಡೆದ ಜಾಗದ ಮೇಲೆ ಒತ್ತಡ ಬಿದ್ದಿದ್ದರಿಂದ ನೋವು ಕಾಣಿಸಿ, ಎಲ್ಲೂ ಪ್ರಯಾಣ ಮಾಡದೆ ಪೂರ್ಣ ವಿಶ್ರಾಂತಿ ಪಡೆಯಲು ವೈದ್ಯರು ಸಲಹೆ ನೀಡಿದ್ದರು. ನೋವು ಹೆಚ್ಚಾಗಿದ್ದರಿಂದ ಪೂರ್ವ ನಿಗದಿತ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಪಡಿಸಿದ್ದರು.

ಮೊದಲ ಬಾರಿಗೆ ‘ಕಾವೇರಿ’ಯಲ್ಲಿ ಬಜೆಟ್ ಪೂರ್ವಭಾವಿ ಸಭೆ : ಬಜೆಟ್ ಪೂರ್ವಭಾವಿ ಸಭೆಗಳು ಸಾಮಾನ್ಯವಾಗಿ ಕೆಪಿಸಿಎಲ್ ‘ಶಕ್ತಿ ಭವನ’ದಲ್ಲಿ ನಡೆಯುತ್ತಿದ್ದವು. ಆದರೆ ಮೊದಲ ಬಾರಿ ಸಿಎಂ ಅಧಿಕೃತ ‘ಕಾವೇರಿ’ ನಿವಾಸದ ಸಣ್ಣ ಸಭಾಂಗಣದಲ್ಲಿ ನಡೆದಿದೆ. ಮಂಡಿ ನೋವಿದ್ದರೂ ಫೆ.6ರಿಂದ ಇಲಾಖಾವಾರು ಸಭೆ ನಡೆಸಿದ ಸಿಎಂ, ರಜಾ ದಿನವಾದ ಎರಡನೇ ಶನಿವಾರವೂ ಸತತ 10 ತಾಸುಗಳ ಕಾಲ ಚರ್ಚಿಸಿದ್ದರು. ಅರಮನೆ ಮೈದಾನದಲ್ಲಿ 11ರಂದು ಏರ್ಪಡಿಸಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದ ಉದ್ಘಾಟನಾ ಸಮಾರಂಭಕ್ಕೆ ಗಾಲಿ ಕುರ್ಚಿಯಲ್ಲಿಯೇ ಬಂದಿದ್ದರು.

Btv Kannada
Author: Btv Kannada

Leave a Comment

Read More

Read More