ಗಂಡ ಮತ್ತು 6 ಮಕ್ಕಳೊಂದಿಗೆ ಸಂಸಾರ ಮಾಡುತ್ತಿದ್ದ ತಾಯಿಯೊಬ್ಬಳು ಭಿಕ್ಷುಕನೊಂದಿಗೆ ಪರಾರಿಯಾದ ಘಟನೆ ಉತ್ತರ ಪ್ರದೇಶದ ಹರ್ದೋಯ್ ಜಿಲ್ಲೆಯಲ್ಲಿ ನಡೆದಿದೆ. ಸುಮಾರು 36 ವರ್ಷದ ಮಹಿಳೆ ರಾಜೇಶ್ವರಿ ಗಂಡ ಮತ್ತು ಮಕ್ಕಳೊಂದಿಗೆ ಸುಖ ಜೀವನವನ್ನು ನಡೆಸುತ್ತಿದ್ದಳು. ಆದರೆ ಭಿಕ್ಷೆ ಕೇಳುವ ನೆಪದಲ್ಲಿ ಆಗಾಗ ಮನೆ ಬಳಿ ಬರುತ್ತಿದ್ದ ಭಿಕ್ಷುಕನ ಮೇಲೆ ಪ್ರೀತಿಯಾಗಿ ಗಂಡ ಮತ್ತು ಮಕ್ಕಳನ್ನು ಬಿಟ್ಟು ಭಿಕ್ಷುಕನೊಂದಿಗೆ ಮಹಿಳೆ ಪರಾರಿಯಾಗಿದ್ದಾಳೆ.
ಮಗಳಿಗೆ ಬಟ್ಟೆ ಹಾಗೂ ತರಕಾರಿ ತರುತ್ತೇನೆ ಎಂದು ಹೇಳಿ ಪತಿ ಎಮ್ಮೆ ಮಾರಿ ಗಳಿಸಿದ್ದ ಹಣವನ್ನು ತೆಗೆದುಕೊಂಡು ಮಾರ್ಕೆಟ್‌ಗೆ ತೆರಳಿದ ರಾಜೇಶ್ವರಿ ಏಕಾಏಕಿ ನಾಪತ್ತೆಯಾಗಿದ್ದಳು. ಪತ್ನಿ ಕಾಣಿಸದೇ ಆತಂಕಗೊಂಡ ಪತಿ ರಾಜು ಪೊಲೀಸರ ಮೊರೆ ಹೋಗಿದ್ದಾರೆ. ತನ್ನ ಪತ್ನಿಯನ್ನು ಯಾರೋ ಅಪಹರಿಸಿದ್ದಾರೆ ಎಂದು ರಾಜು ದೂರು ನೀಡಿದ್ದರು. ಪತಿಯ ದೂರು ಆಧರಿಸಿ ತನಿಖೆಗಿಳಿದಾಗ ಸತ್ಯ ಬಯಲಾಗಿದೆ.
ಪೊಲೀಸರ ತನಿಖೆ ವೇಳೆ ನಾಪತ್ತೆಯಾಗಿದ್ದ ರಾಜೇಶ್ವರಿ, ನನ್ಹೇ ಪಂಡಿತ್ ಎಂಬ ಹೈಟೆಕ್ ಭಿಕ್ಷುಕನೊಂದಿಗೆ ಪತ್ತೆಯಾಗಿದ್ದಾಳೆ. ಈತ ಭಿಕ್ಷೆಯ ನೆಪದಲ್ಲಿ ಆಗಾಗಾ ಮನೆಯ ಮುಂದೆ ಬಂದು ರಾಜೇಶ್ವರಿ ಜೊತೆ ಮಾತುಕತೆ ನಡೆಸುತ್ತಿದ್ದ. ಈ ವೇಳೆ ಮಹಿಳೆಗೆ ಈತನ ಮೇಲೆ ಪ್ರೀತಿಯಾಗಿದೆ. ಅಲ್ಲದೇ ಭಿಕ್ಷುಕ ಮೊಬೈಲ್ ಹೊಂದಿದ್ದರಿಂದ ಇಬ್ಬರೂ ಪರಸ್ಪರ ನಂಬರ್ ಶೇರ್ ಮಾಡಿಕೊಂಡು ಮೊಬೈಲ್‌ನಲ್ಲೇ ಮಾತುಕತೆ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಇದನ್ನೂ ಓದಿ : ಸುಳ್ಳು ಹೇಳಿದ್ದೇ ನಟ ದರ್ಶನ್ಗೆ ಮುಳುವಾಯ್ತಾ? ಪೊಲೀಸರ SLPಯ ಪ್ರಮುಖ ಅಂಶಗಳೇನು ಗೊತ್ತಾ?