ಬೆಂಗಳೂರು : ಕೆಂಗೇರಿ ಸಮೀಪದ ಅಗರ ಗ್ರಾಮದಲ್ಲಿ ರಾತ್ರೋ ರಾತ್ರಿ ನೂರಾರು ಕೋಟಿ ಜಮೀನು ಕಬಳಿಸಲು ಯತ್ನಿಸಿದ್ದು, ಈ ಪ್ರಕರಣ ಸಂಬಂಧ ಆರೋಪಿಗಳ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.

ಅಗರ ಗ್ರಾಮದ ಸರ್ವೆ ನಂ. 28 ರಲ್ಲಿರುವ 7 ಎಕರೆ 5 ಗುಂಟೆ ಸರ್ಕಾರಿ ಜಮೀನನ್ನು ನಿವೇಶನ ರಹಿತ ಪರಿಶಿಷ್ಟ ಜಾತಿ (SC) ಮತ್ತು ಪರಿಶಿಷ್ಟ ಪಂಗಡದ (ST) ಫಲಾನುಭವಿಗಳಿಗೆ ಹಂಚಿಕೆ ಮಾಡಲು ಸರ್ಕಾರವು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ (BBMP) ಹಸ್ತಾಂತರಿಸಿತ್ತು. 2015ರಲ್ಲಿಯೇ ತಹಶೀಲ್ದಾರ್ ಅವರು ಅಧಿಕೃತವಾಗಿ ಈ ಜಮೀನನ್ನು ಬಿಬಿಎಂಪಿ ವಶಕ್ಕೆ ನೀಡಿದ್ದರು.

ಕಳೆದ ಏಪ್ರಿಲ್ 09, 2026ರಂದು ಆರೋಪಿಗಳು ಸಂಚು ರೂಪಿಸಿ, ಯಾವುದೇ ಹಕ್ಕುಪತ್ರ ಅಥವಾ ಅಧಿಕೃತ ದಾಖಲೆಗಳಿಲ್ಲದೆ ಈ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿದ್ದಾರೆ. ಸ್ಥಳದಲ್ಲಿ ತಮ್ಮ ಸ್ವಾಧೀನವನ್ನು ತೋರಿಸುವ ಉದ್ದೇಶದಿಂದ ರಾತ್ರೋರಾತ್ರಿ ಮರದ ಕಂಬಗಳನ್ನು ನೆಟ್ಟು, ಟರ್ಪಾಲ್ ಬಳಸಿ 300ಕ್ಕೂ ಹೆಚ್ಚು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿದ್ದಾರೆ.

ಆದ್ದರಿಂದ ಸರ್ಕಾರಿ ಜಮೀನನ್ನು ಕಬಳಿಸಲು ಯತ್ನಿಸಿದ ಅಲೆಮಾರಿ ಅರೆ ಅಲೆಮಾರಿ ಜಾಗೃತಿ ವೇದಿಕೆ ರಾಜ್ಯಾಧ್ಯಕ್ಷ ರಾಮಕೃಷ್ಣ, ಲಕ್ಷ್ಮಿ ಕೋಂ ಶ್ರೀನಿವಾಸ, ನಂದಿನಿ ಡಿ ಹಾಗೂ ಸುಮಾರು 300 ಜನ ಇತರರು ಸೇರಿ ಅಕ್ರಮವಾಗಿ ಅತಿಕ್ರಮ ಪ್ರವೇಶ ಮಾಡಿರುವವರ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲು ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಸರ್ಕಾರದ ಜಮೀನನ್ನು ಅಕ್ರಮವಾಗಿ ವಶಪಡಿಸಿಕೊಳ್ಳಲು ಸಂಚು ರೂಪಿಸಿದ ಆರೋಪಿಗಳ ವಿರುದ್ಧ ಕಗ್ಗಲಿಪುರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.













