ಲೂಸ್‌ಮಾದ ಯೋಗಿ, ರಮ್ಯಾ ಜೋಡಿಯಾಗಿ ನಟಿಸಿದ್ದ ‘ಸಿದ್ಲಿಂಗು’ ಸಿನಿಮಾ ಕನ್ನಡ ಚಿತ್ರ ರಂಗದಲ್ಲಿ ಹೊಸ ರೀತಿಯ ನಿರೂಪಣೆಯಿಂದ ಜನಮನ್ನಣೆ ಗಳಿಸಿತ್ತು. ಆ ಸಿನಿಮಾ ತೆರೆಕಂಡು 12 ವರ್ಷಗಳ ಬಳಿಕ ಸೆಟ್ಟೇರಿದ ‘ಸಿದ್ದಿಂಗು-2’ ಫೆಬ್ರವರಿ 14ರಂದು ತೆರೆಗೆ ಬರುತ್ತಿದೆ. ಈಗಾಗಲೇ ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಮುಳುಗಿರುವ ಸಿದ್ಲಿಂಗು 2 ಚಿತ್ರತಂಡ, ಡಬ್ಬಿಂಗ್ ಕಾರ್ಯವನ್ನೂ ಮುಗಿಸುವ ಹಂತಕ್ಕೆ ತಲುಪಿದೆ.
ಹಾಗೆಯೇ ಮುಂದಿನವಾರದಲ್ಲಿ ನಾಯಕಿ ಸೋನುಗೌಡರವರ ಮೊದಲ ನೋಟವನ್ನ ಅನಾವರಣಗೊಳಿಸಲು ಸಜ್ಜಾಗಿದೆ. ಇದರ ಜೊತೆಗೆ ಹಾಡಿನ ಲಿರೀಕಲ್ ವಿಡೀಯೋವನ್ನೂ ಬಿಡುಗಡೆ ಮಾಡಲು ಸಜ್ಜಾಗುತ್ತಿರುವ ತಂಡ ಈ ತಿಂಗಳ ಅಂತ್ಯದಲ್ಲಿ ಮತ್ತೊಂದು ಹಾಡಿನ ಸಂಪೂರ್ಣ ವಿಡಿಯೋವನ್ನ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದೆ.
ಫೆಬ್ರವರಿ 14ರಂದು ಸಿದ್ಲಿಂಗು ಎಲ್ಲರ ಮನೆ ಮನಗಳಿಗೆ ಬರಲಿದ್ದು, ‘ತೋತಾಪುರಿ’ ಬಳಿಕ ನಿರ್ದೇಶಕ ವಿಜಯ್ ಪ್ರಸಾದ್ ‘ಸಿದ್ಲಿಂಗು’ ಸೀಕ್ವೆಲ್ ಕಥೆಯನ್ನು ಚಿತ್ರವಾಗಿಸಿದ್ದಾರೆ. ‘ಜಮಾಲಿಗುಡ್ಡ’ ಚಿತ್ರದ ನಿರ್ಮಾಪಕ ಶ್ರೀಹರಿ ರೆಡ್ಡಿ ನಿಹಾರಿಕಾ ಫಿಲ್ಡ್ ಅಡಿಯಲ್ಲಿ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
‘ಪ್ರೇಮಕಥೆಯನ್ನು ಹೊಂದಿರುವ ಚಿತ್ರ ಪ್ರೇಮಿಗಳ ದಿನಕ್ಕೆಯೇ ಉಡುಗೊರೆಯಾಗಿ ಬರುತ್ತಿದ್ದು, ಸಿದ್ಲಿಂಗು ಮೊದಲ ಪಾರ್ಟ್ ಹಾಸ್ಯ, ಸಂಬಂಧಗಳು, ಪ್ರೀತಿ, ಭಾವನೆಗಳಿಂದ ಜನರ ಮೆಚ್ಚುಗೆ ಗಳಿಸಿತ್ತು. ಇಲ್ಲಿ ಬರೀ ಮೀನಿಂಗ್ ಇರಲಿದೆ. ನನ್ನ ಹಿಂದಿನ ಸಿನಿಮಾಗಳಂತೆ ಡಬಲ್ ಮೀನಿಂಗ್ ಇರುವುದಿಲ್ಲ. ಮೈಸೂರು, ಬೆಂಗಳೂರು ಸುತ್ತಮುತ್ತ ಚಿತ್ರೀಕರಣಗೊಂಡಿದ್ದು, ಒಂದು ಹಾಡನ್ನು ಜಮ್ಮು- ಕಾಶ್ಮೀರದಲ್ಲಿ ಚಿತ್ರೀಕರಿಸಲಾಗಿದೆ’ ಎಂದು ಈಗಾಗಲೇ ನಿರ್ದೇಶಕರು ಮಾಹಿತಿ ನೀಡಿದ್ದಾರೆ.
‘ಕಿರಗೂರಿನ ಗಯ್ಯಾಳಿಗಳು’ ಖ್ಯಾತಿಯ ಸೋನುಗೌಡ ಈ ಚಿತ್ರಕ್ಕೆ ನಾಯಕಿಯಾಗಿದ್ದು, ಅನೂಪ್ ಸೀಳಿನ್ ಸಂಗೀತ, ಅರಸು ಅಂತಾರೆ ಸಾಹಿತ್ಯ ಚಿತ್ರಕ್ಕಿದೆ. ಪದ್ಮಜಾ ರಾಜ್, ಆಂಟೋನಿ ಕಮಲ್, ಮಹಾಂತೇಶ್ ಸೇರಿದಂತೆ ದೊಡ್ಡ ತಾರಾಗಣವಿದೆ.
ಇದನ್ನೂ ಓದಿ : 450 ಕೋಟಿ ಹಗರಣ – ಶುಭ್ಮನ್ ಗಿಲ್ ಸೇರಿ ನಾಲ್ವರು ಸ್ಟಾರ್ ಕ್ರಿಕೆಟಿಗರಿಗೆ CID ಸಮನ್ಸ್!