ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ನಟ ದರ್ಶನ್ ತೀವ್ರ ವಿಚಾರಣೆಗೆ ಎದುರಿಸುತ್ತಿದ್ದಾರೆ. ಅನ್ನಪೂರ್ಣೇಶ್ವರಿ ಪೊಲೀಸ್ ಠಾಣೆಯ ಕಸ್ಟಡಿಯಲ್ಲಿರುವ ದರ್ಶನ್ ಅವರನ್ನು ಇವತ್ತು ವಕೀಲರು ಭೇಟಿಯಾಗಿದ್ದಾರೆ. ಇಂದು ಬೆಳಗ್ಗೆ ದರ್ಶನ್ ಪರ ವಕೀಲರು ಭೇಟಿಯಾಗಿ ಚರ್ಚೆ ಮಾಡಿದ್ದಾರೆ.
ಅನ್ನಪೂರ್ಣೇಶ್ವರಿ ನಗರ ಠಾಣೆ ಮುಂದೆ ವಕೀಲ ಅನಿಲ್ ಬಾಬು ಮಾತನಾಡಿ, ಕೋರ್ಟ್ ನಿರ್ದೇಶನದ ಪ್ರಕಾರ ಇವತ್ತು ಸಂಜೆ 5 ಗಂಟೆಯೊಳಗೆ ಆರೋಪಿಗಳನ್ನು ಹಾಜರುಪಡಿಸಬೇಕು. ಅವರು ಇನ್ನೂ ಕಸ್ಟಡಿಗೆ ಕೇಳ್ತಾರೋ? ಇಲ್ಲವೋ ಅನ್ನೋದ್ರ ಬಗ್ಗೆ ನಮಗೆ ಗೊತ್ತಿಲ್ಲ. ಮಧ್ಯಾಹ್ನ ಪೊಲೀಸ್ ಅಧಿಕಾರಿಗಳ ನಿರ್ಧಾರವನ್ನು ನೋಡಿ ನಾವು ಮುಂದಿನ ಕಾನೂನು ಹೋರಾಟದ ಬಗ್ಗೆ ನಿರ್ಧಾರ ಮಾಡ್ತೇವೆ ಎಂದರು.
ಬಹುತೇಕ ತನಿಖೆ ಮುಗಿದಿರಬಹುದು. ಆರೋಪಿಗಳು ನ್ಯಾಯಾಂಗ ಬಂಧನಕ್ಕೆ ಒಳಗಾದ ನಂತರ ಚರ್ಚೆ ಮಾಡಿ ಜಾಮೀನು ಅರ್ಜಿ ಹಾಕ್ತೇವೆ. ದರ್ಶನ್ ಜೊತೆ ಮಾತುಕತೆ ಮಾಡಿಕೊಂಡು ಬಂದಿದ್ದೇವೆ ಅಷ್ಟೇ. ಅವರ ಆರೋಗ್ಯ ಚೆನ್ನಾಗಿದೆ ಎಂದು ವಕೀಲ ಅನೀಲ್ ಬಾಬು ತಿಳಿಸಿದ್ದಾರೆ.
ನಿನ್ನೆ ಆರೋಪಿಗಳಿಗೆ ಡಿಎನ್ಎ ಟೆಸ್ಟ್ ಮಾಡಿದ್ದಾರೆ ಎನ್ನಲಾಗಿರುವ ವಿಚಾರಕ್ಕೆ ವಕೀಲ ರಂಗನಾಥ್ ರೆಡ್ಡಿ ಪ್ರತಿಕ್ರಿಯಿಸಿ, ಪರೀಕ್ಷೆಗೆ ಕೋರ್ಟ್ ಅನುಮತಿ ಬೇಕು, ಸ್ಯಾಂಪಲ್ ಪಡೆಯಲು ಬೇಕಾಗುತ್ತದೆ. ಆದ್ರೆ ಪೊಲೀಸರು ತಗೊಂಡಿದ್ದಾರಾ ಇಲ್ವೊ ಗೊತ್ತಿಲ್ಲ. ಡಿಎನ್ಎ ಟೆಸ್ಟ್ ಮಾಡಿದ್ರಾ ಇಲ್ವೊ ಅನ್ನೋದು ನಮಗೆ ಗೊತ್ತಿಲ್ಲ. ಅದೆಲ್ಲಾ ಚಾರ್ಜ್ ಶೀಟ್ ನಲ್ಲಿರುತ್ತದೆ. ಅಲ್ಲಿ ನಮಗೆ ಗೊತ್ತಾಗುತ್ತದೆ ಎಂದಿದ್ದಾರೆ.
ಇದನ್ನೂ ಓದಿ : ಟಿ20 ವಿಶ್ವಕಪ್ : ಇಂದು ಭಾರತ-ಅಫ್ಘಾನಿಸ್ತಾನ ಮುಖಾಮುಖಿ, ಪಂದ್ಯ ಎಷ್ಟು ಗಂಟೆಗೆ ಶುರು?