ಟಿ20 ವಿಶ್ವಕಪ್ 2024 : ಲೀಗ್ ಹಂತದಲ್ಲಿ ಅಜೇಯ ಸಾಧನೆ ಮಾಡಿರುವ ಭಾರತ ತಂಡ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೂಪರ್-8 ಹಂತದಲ್ಲೂ ಗೆಲುವಿನ ಓಟ ಮುಂದುವರಿಸುವ ಹಂಬಲದಲ್ಲಿದೆ. ಇಂದು ಸೂಪರ್-8 ಸುತ್ತಿನ ಪಂದ್ಯದಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ ತಂಡಗಳು ಮುಖಾಮುಖಿಯಾಗಲಿದ್ದು, ವೆಸ್ಟ್ ಇಂಡೀಸ್ನ ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದೆ.
ಭಾರತ ಹಾಗೂ ಅಫ್ಘಾನಿಸ್ತಾನ ಎರಡೂ ತಂಡಕ್ಕೂ ಈ ಪಂದ್ಯ ಬಹಳ ಮುಖ್ಯವಾಗಿದೆ. ಏಕೆಂದರೆ ಈ ಪಂದ್ಯದ ನಂತರ ಉಭಯ ತಂಡಗಳು ಬಾಂಗ್ಲಾದೇಶ ಹಾಗೂ ಆಸ್ಟೇಲಿಯಾ ತಂಡಗಳನ್ನು ಎದುರಿಸಲಿವೆ. ಇದರಿಂದಾಗಿ ಮೊದಲ ಪಂದ್ಯ ಗೆಲ್ಲುವುದು ಈ ಎರಡೂ ತಂಡಗಳಿಗೂ ಬಹಳ ಮುಖ್ಯವಾಗಿದೆ.
ಟಿ20 ಕ್ರಿಕೆಟ್ನಲ್ಲಿ ಭಾರತ ಮತ್ತು ಅಫ್ಘಾನಿಸ್ತಾನ್ ತಂಡಗಳು ಒಟ್ಟು 8 ಬಾರಿ ಮುಖಾಮುಖಿಯಾಗಿದೆ. ಈ ವೇಳೆ 7 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಜಯಭೇರಿ ಬಾರಿಸಿದೆ. ಇನ್ನು ಒಂದು ಪಂದ್ಯವು ರದ್ದಾಗಿದೆ. ಇದೀಗ ಟಿ20 ವಿಶ್ವಕಪ್ನ ದ್ವಿತೀಯ ಸುತ್ತಿನಲ್ಲಿ ಉಭಯ ತಂಡಗಳು ಮತ್ತೊಮ್ಮೆ ಮುಖಾಮುಖಿಯಾಗಲು ಸಜ್ಜಾಗಿ ನಿಂತಿದೆ.
ಪಂದ್ಯ ಎಷ್ಟು ಗಂಟೆಗೆ ಶುರು? ಬಾರ್ಬಡೋಸ್ನಲ್ಲಿ ನಡೆಯಲಿರುವ ಭಾರತ ಮತ್ತು ಅಫ್ಘಾನಿಸ್ತಾನ ನಡುವಣ ಪಂದ್ಯವು ಹಗಲಿನಲ್ಲಿ ನಡೆಯಲಿದ್ದು, ಬೆಳಿಗ್ಗೆ 10.30 ರಿಂದ ಶುರುವಾಗಲಿದೆ. ಅಂದರೆ ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ನೇರ ಪ್ರಸಾರ ಇರಲಿದೆ. ಈ ಪಂದ್ಯದ ನೇರ ಪ್ರಸಾರ ಸ್ಟಾರ್ ಸ್ಪೋರ್ಟ್ಸ್ ಕನ್ನಡ ಸೇರಿದಂತೆ ಸ್ಟಾರ್ ನೆಟ್ವರ್ಕ್ನ ಸ್ಪೋರ್ಟ್ಸ್ ಚಾನೆಲ್ಗಳಲ್ಲಿ ಇರಲಿದೆ. ಈ ಪಂದ್ಯವನ್ನು ಡಿಸ್ನಿ ಹಾಟ್ ಸ್ಟಾರ್ ಮೊಬೈಲ್ ಆ್ಯಪ್ನಲ್ಲಿ ಉಚಿತವಾಗಿ ವೀಕ್ಷಿಸಬಹುದು.
ಇದನ್ನೂ ಓದಿ : ಪರೀಕ್ಷೆಯಲ್ಲಿ ಅಕ್ರಮದ ಶಂಕೆ : ಯುಜಿಸಿ-ನೆಟ್ ಪರೀಕ್ಷೆ ರದ್ದುಗೊಳಿಸಿದ ಎನ್‌ಟಿಎ, ಸಿಬಿಐ ತನಿಖೆಗೆ ಆದೇಶ..!