ಬೆಂಗಳೂರು : ನಗರದಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಜನ ಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೆಳ್ಳಂಬೆಳಗ್ಗೆ ತಮ್ಮ ತಮ್ಮ ಕೆಲಸಗಳಿಗೆ ಹೊರಟಿದ್ದ ಜನರಿಗೆ ಬಿಗ್ ಶಾಕ್ ಆಗಿದೆ. ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಸಂಚಾರ ಮಾಡಲಾಗದೇ ಪರದಾಡುವಂತಾಗಿದೆ.
ಇನ್ನು, ಮಾರತಹಳ್ಳಿಯಲ್ಲಿರುವ ಸೊನೆಸ್ಟಾ ಸಿಲ್ವರ್ ಓಕ್ ಅಪಾರ್ಟ್ಮೆಂಟ್ಗೆ ಜಲದಿಗ್ಬಂಧನವಾಗಿದ್ದು, ಭಾರೀ ಮಳೆಗೆ ಅಪಾರ್ಟ್ಮೆಂಟ್ನ ಬೇಸ್ಮೆಂಟ್ ಜಲಾವೃತವಾಗಿದೆ. ಅಪಾರ್ಟ್ಮೆಂಟ್ ಪಕ್ಕದ ಗೋಡೆ ಕುಸಿದ ಪರಿಣಾಮ ನೀರು ತುಂಬಿದ್ದು, ಕೂದಲೆಳೆ ಅಂತರದಲ್ಲಿ ಮನೆ ಮಂದಿ ಪಾರಾಗಿದ್ದಾರೆ.
ಅಪಾರ್ಟ್ಮೆಂಟ್ನಲ್ಲಿ 180-200 ಜನರು ವಾಸ ಮಾಡುತ್ತಿದ್ದು, ಆತಂಕ ಹೆಚ್ಚಾಗಿದೆ. ಇಂದು ಮುಂಜಾನೆ 4:20ರ ಸುಮಾರಿಗೆ ಈ ಘಟನೆ ನಡೆದಿದ್ದು, ಗೋಡೆ ಕುಸಿತದ ಶಬ್ಧ ಕೇಳಿ ಅಪಾರ್ಟ್ಮೆಂಟ್ನಿಂದ ಜನರು ಹೊರ ಬಂದಿದ್ದಾರೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಭೇಟಿ ನೀಡಿದ್ದು, ಅಪಾರ್ಟ್ಮೆಂಟ್ ಬೇಸ್ಮೆಂಟ್ನಲ್ಲಿದ್ದ ನೀರಿನ ತೆರವು ಕಾರ್ಯ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ಅಬ್ಬರಿಸಿ, ಬೊಬ್ಬಿರಿದ ಮಳೆರಾಯ.. ನಗರದ ಅನೇಕ ರಸ್ತೆಗಳು ಸಂಪೂರ್ಣ ಜಲಾವೃತ..!