ಖಜುರಾಹೊ : ರಾಜಕೀಯ ರಂಗದ ಅಜಾತಶತ್ರು, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ 100ನೇ ಜನ್ಮದಿನದಂದೇ ಅವರ ಬಹದೊಡ್ಡ ಕನಸು ನನಸಾಗುತ್ತಿದೆ. ವಾಜಪೇಯಿ ಕಂಡಿದ್ದ ಕನಸನ್ನು ಈಡೇರಿಸಲು ನರೇಂದ್ರ ಮೋದಿ ಸರ್ಕಾರ ಮುಂದಾಗಿದೆ. ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ ನದಿಗಳ ಜೋಡಣೆಗೆ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂದಾಗಿದೆ. ಮಧ್ಯಪ್ರದೇಶದ ಖಜುರಾಹೊದಲ್ಲಿ ಕೆನ್ ನದಿ ಹಾಗೂ ಬೆಟ್ವಾ ನದಿಗಳ ಜೋಡಣೆಗೆ ಪ್ರಧಾನಿ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಡಾ. ಮೋಹನ್ ಯಾದವ್, ಉಪ ಮುಖ್ಯಮಂತ್ರಿಗಳಾದ ರಾಜೇಂದ್ರ ಶುಕ್ಲಾ, ಜಗದೀಶ್ ದೇವ್ರಾ, ಸಚಿವರಾದ ರಾಕೇಶ್ ಸಿಂಗ್, ಪ್ರಹ್ಲಾದ್ ಪಟೇಲ್, ಜಲಸಂಪನ್ಮೂಲ ಸಚಿವೆ ತುಳಸಿ ಸಿಲಾವತ್, ಕೃಷಿ ಸಚಿವ ಇಂದಲ್ ಸಿಂಗ್ ಕಂಸಾನಾ, ಕೇಂದ್ರ ಕೃಷಿ ಸಚಿವ ಹಾಗೂ ಮಾಜಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಬಿಜೆಪಿ ರಾಜ್ಯಾಧ್ಯಕ್ಷ ವಿ.ಡಿ.ಶರ್ಮಾ ಸೇರಿ ಹಲವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿಯಾದಾಗ ವಾಜಪೇಯಿ ಅವರ ಕನಸು ನದಿಗಳ ಜೋಡಣೆ ಯೋಜನೆಯನ್ನೂ ಜಾರಿಗೆ ತರಲು ಬಯಸಿದ್ದರು. ಅದು ಸಾಧ್ಯವಾಗಿರಲಿಲ್ಲ. ಬಳಿಕ ಮಧ್ಯಪ್ರದೇಶದ ಮುಖ್ಯಮಂತ್ರಿ ಡಾ.ಮೋಹನ್ ಯಾದವ್ ಮತ್ತು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಒಟ್ಟಾಗಿ ಈ ಕಾರ್ಯದಲ್ಲಿ ಎದುರಾದ ಎಲ್ಲಾ ಅಡೆತಡೆಗಳನ್ನು ನಿವಾರಿಸಿದರು. ಈಗ ಕೇಂದ್ರದಿಂದ ಅನುದಾನ ಮಂಜೂರಾತಿಯೂ ಸಿಕ್ಕಿದೆ. ಈಗ ಪ್ರಧಾನಿ ನರೇಂದ್ರ ಮೋದಿ ಅದರ ಅಡಿಪಾಯ ಹಾಕುತ್ತಿದ್ದಾರೆ.
ಮಧ್ಯಪ್ರದೇಶದ ಛತ್ತರ್‌ಪುರ ಮತ್ತು ಪನ್ನಾ ಜಿಲ್ಲೆಗಳಲ್ಲಿ ಕೆನ್-ಬೆಟ್ವಾ ಲಿಂಕ್ ಯೋಜನೆಯನ್ನು ಆರಂಭಿಸಿದೆ. ಯೋಜನೆಯಡಿ ಪನ್ನಾ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕೆನ್ ನದಿಯ ಮೇಲೆ 77 ಮೀ. ಎತ್ತರ ಮತ್ತು 2.13 ಕಿಲೋಮೀಟರ್ ಉದ್ದದ ದೌಧನ್ ಅಣೆಕಟ್ಟು ನಿರ್ಮಿಸಲಾಗುವುದು. ಇಲ್ಲಿ 2,853 ಮಿಲಿಯನ್ ಕ್ಯೂಬಿಕ್ ಮೀಟರ್ ನೀರು ಸಂಗ್ರಹವಾಗಲಿದೆ. ಅಣೆಕಟ್ಟಿನ ಮೇಲಿನ ಹಂತದಲ್ಲಿ 1.9 ಕಿ.ಮೀ ಮತ್ತು ಕೆಳಮಟ್ಟದಲ್ಲಿ 1.1 ಕಿ.ಮೀ ಸುರಂಗ ನಿರ್ಮಿಸಲಾಗುವುದು. ಈ ಸುರಂಗಗಳ ಮೂಲಕ, ಕೆನ್ ನದಿಯ ಉಳಿದ ನೀರನ್ನು 221 ಕಿಮೀ ಉದ್ದದ ಲಿಂಕ್ ಕಾಲುವೆಯ ಮೂಲಕ ಬೆಟ್ವಾ ನದಿಗೆ ಬಿಡುಗಡೆ ಮಾಡಲಾಗುತ್ತದೆ.
ಈ ಕಾಲುವೆ ಮಧ್ಯಪ್ರದೇಶದ ಛತ್ತರ್‌ಪುರ, ಟಿಕಮ್‌ಗಢ, ನಿವಾರಿ ಮೂಲಕ ಹಾದು ಉತ್ತರ ಪ್ರದೇಶದ ಝಾನ್ಸಿಯಲ್ಲಿ ಬೆಟ್ವಾ ನದಿಯನ್ನು ಸೇರುತ್ತದೆ. ಈ ಜಿಲ್ಲೆಗಳ ಗ್ರಾಮಗಳ ರೈತರಿಗೆ ನೀರಾವರಿಗಾಗಿ ಕಾಲುವೆಯಿಂದ ನೀರು ಲಭ್ಯವಾಗಲಿದೆ. ಅಲ್ಲದೆ, ಕುಡಿಯುವ ಉದ್ದೇಶಕ್ಕೂ ನೀರು ಲಭ್ಯವಾಗಲಿದೆ. ಇದಾದ ನಂತರ ಉಳಿದ ನೀರನ್ನು ಬೆಟ್ವಾ ನದಿಗೆ ಬಿಡಲಾಗುವುದು. ಇದಲ್ಲದೇ ಬೀನಾ ನದಿ ಮತ್ತು ಉರ್ ನದಿಗೆ ಅಣೆಕಟ್ಟುಗಳನ್ನು ನಿರ್ಮಿಸಲಾಗುವುದು.
ಕೆನ್ ಬೆಟ್ವಾ ಲಿಂಕ್ ಯೋಜನೆಯಿಂದ ಮಧ್ಯಪ್ರದೇಶದ 10 ಜಿಲ್ಲೆಗಳಲ್ಲಿ 8.11 ಲಕ್ಷ ಹೆಕ್ಟೇರ್ ಭೂಮಿಗೆ ಮತ್ತು ಉತ್ತರ ಪ್ರದೇಶದ 4 ಜಿಲ್ಲೆಗಳಲ್ಲಿ 2.51 ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸುತ್ತದೆ. ಅಲ್ಲದೆ 65 ಲಕ್ಷ ಜನರಿಗೆ ಕುಡಿಯುವ ನೀರು ಸಿಗಲಿದೆ ಎಂದು ಸರ್ಕಾರ ಅಂದಾಜಿಸಿದೆ.
ಇದನ್ನೂ ಓದಿ : ರಾಜ್ಯಾದ್ಯಂತ ಇಂದಿನಿಂದ ಐದು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ – ಹೈ ಅಲರ್ಟ್ ಘೋಷಣೆ..!