ತುಮಕೂರು : ಮಧುಗಿರಿ ತಾಲೂಕಿನ ಚಿನ್ನೆನಹಳ್ಳಿ ಗ್ರಾಮದಲ್ಲಿ ಕಲುಷಿತ ನೀರು ಕುಡಿದು, ನಾಲ್ವರು ಸಾವನ್ನಪ್ಪಿರುವ ಪ್ರಕರಣ ಮಾಸುವ ಮುನ್ನವೇ ಮಧುಗಿರಿಯಲ್ಲಿ ಮತ್ತೊಂದು ದುರಂತ ಸಂಭವಿಸಿದೆ. ದೇವರ ಕಾರ್ಯಕ್ಕೆ ಮಾಡಿದ್ದ ಊಟ ಸೇವಿಸಿ ಓರ್ವ ಮಹಿಳೆ ಸಾವನ್ನಪ್ಪಿ, 6 ಜನ ಆಸ್ಪತ್ರೆಗೆ ದಾಖಲಾಗಿರುವ ಘಟನೆ ತುಮಕೂರು ಜಿಲ್ಲೆ ಮಧುಗಿರಿ ತಾಲ್ಲೂಕಿನ ಬುಳ್ಳಸಂದ್ರ ಗ್ರಾಮದಲ್ಲಿ ನಡೆದಿದೆ. 45 ವರ್ಷದ ಕಾಟಮ್ಮ ಮೃತ ದುರ್ದೈವಿ.
ಶನಿವಾರ ಗ್ರಾಮದಲ್ಲಿ ಮುತ್ತುರಾಯಸ್ವಾಮಿ, ಕರಿಯಮ್ಮ ದೇವರಿಗೆ ಹರಿಸೇವೆ ಮಾಡಲಾಗಿತ್ತು. ಹರಿಸೇವೆ ಹಿನ್ನೆಲೆ ಇಡೀ ಗ್ರಾಮಸ್ಥರಿಗೆ ಊಟ ಮಾಡಲಾಗಿತ್ತು. ಪೂಜೆಯಲ್ಲಿ ಪಾಲ್ಗೊಂಡಿದ್ದ ಗ್ರಾಮಸ್ಥರು ಊಟ ಮಾಡಿದ ಬಳಿಕ ಕೆಲವರಿಗೆ ವಾಂತಿ, ಬೇಧಿ ಕಾಣಿಸಿಕೊಂಡಿತ್ತು.
ಇನ್ನು ಶನಿವಾರ ಬುಳ್ಳುಸಂದ್ರ ಗ್ರಾಮದಲ್ಲಿ ವೃದ್ದೆ ತಿಮ್ಮಕ್ಕ (85) ಸಾವನ್ನಪ್ಪಿದ್ರು. ಬಳಿಕ ಭಾನುವಾರ ವೃದ್ದೆ ಗಿರಿಯಮ್ಮ(90) ಸಾವನಪ್ಪಿದ್ದಾರೆ. ಈ ಇಬ್ಬರು ವಯೋಸಹಜ ಕಾಯಿಲೆಯಿಂದ ಸಾವನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆ ತಿಳಿಸಿವೆ.
ಇದೀಗ ವಾಂತಿ ಭೇದಿಯಿಂದ ಚಿಕಿತ್ಸೆ ಪಡೆಯುತ್ತಿದ್ದ ಕಾಟಮ್ಮ ಇಂದು ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಸಾವನ್ನಾಪ್ಪಿದ್ದಾರೆ. ಆದ್ರೆ ಮೊದಲ ಇಬ್ಬರದ್ದು ವಯೋ ಸಹಜ ಸಾವು ಎಂದು ಅಧಿಕಾರಿಗಳು ಹೇಳ್ತಿದ್ದಾರೆ. ಒಂದೇ ಗ್ರಾಮದಲ್ಲಿ ಮೂವರು ಸಾವನ್ನಪ್ಪಿದ್ದರಿಂದ ಅನುಮಾನ ಹೆಚ್ಚಾಗುತ್ತಿದೆ.
ಇನ್ನು ಗ್ರಾಮಕ್ಕೆ ಎ.ಸಿ ತಹಶಿಲ್ದಾರ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಸ್ವಸ್ಥಗೊಂಡ 6 ಜನರಿಗೆ ಮಧುಗಿರಿ ತಾಲ್ಲೂಕು ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ ನೀಡಲಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಲಕ್ಷಣ ಕಾಣಿಸಿಕೊಂಡವರಿಗೆ ಆರೋಗ್ಯ ಇಲಾಖೆ ವೈದ್ಯರು ಹಾಗೂ ಸಿಬ್ಬಂದಿಗಳು ಗ್ರಾಮದ ಸರ್ಕಾರಿ ಶಾಲೆಯ ಕೊಠಡಿಯೊಂದರಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡುತ್ತಿದ್ದಾರೆ.
ಇದನ್ನೂ ಓದಿ : ಚಿತ್ರದುರ್ಗದಲ್ಲಿ ಕೆಟ್ಟು ನಿಂತಿದ್ದ ಲಾರಿಗೆ ಆಂಬುಲೆನ್ಸ್ ಡಿಕ್ಕಿ – ಸ್ಥಳದಲ್ಲೇ ಮಹಿಳೆ ಸಾವು..!