ಗುವಾಹಟಿ : ಅಪ್ರಾಪ್ತ ಮಗಳೊಬ್ಬಳು ಹೆತ್ತಮ್ಮನನ್ನೇ ಎಲೆ ಅಡಿಕೆ ಕುಟ್ಟುವ ಕಲ್ಲಿನಿಂದ (ಕುಟ್ಟಾಣಿ) ಹೊಡೆದು ಹತ್ಯೆ ಮಾಡಿದ ಆಘಾತಕಾರಿ ಘಟನೆ ಅಸ್ಸಾಂನ ಗುವಾಹಟಿಯಲ್ಲಿ ನಡೆದಿದೆ. ತಾಯಿಯನ್ನು ಕೊಲೆ ಮಾಡಿದ ಮಗಳು ತಾನಿಯಾ ಕುಮಾರಿ (17) ಉದಯೋನ್ಮುಖ ಟೆನ್ನಿಸ್ ಪ್ಲೇಯರ್ ಆಗಿದ್ದಳು ಎಂದು ತಿಳಿದು ಬಂದಿದೆ.
ಯುವತಿಯ ತಂದೆ ಟೆನ್ನಿಸ್ ಕೋಚರ್ ಆಗಿದ್ದು, ಸಂಜೆ ಅವರು ಕೋಚಿಂಗ್ ನೀಡುವುದಕ್ಕಾಗಿ ಡ್ಯೂಟಿಗೆ ತೆರಳಿದ ನಂತರ ಈ ದುರ್ಘಟನೆ ಸಂಭವಿಸಿದೆ. ತಾಯಿ ಮಂಜುದೇವಿ ಹಾಗೂ ತಾನಿಯಾಗೆ ಮಾತಿಗೆ ಮಾತು ಬೆಳೆದು ಅದು ಕೊಲೆಯಲ್ಲಿ ಅಂತ್ಯವಾಗಿದೆ. ಮಗಳು ತನ್ನ 40 ವರ್ಷ ಪ್ರಾಯದ ಹೆತ್ತಬ್ಬೆಯನ್ನು ಕುಟ್ಟಾಣಿಯಿಂದ ಹೊಡೆದು ಸಾಯಿಸಿದ್ದಾಳೆ.
ಗುವಾಹಟಿಯ ಚಚಲ್ ಪ್ರದೇಶದ ಪೂರ್ಣಿಮಾ ಮೆನ್ಸನ್ನಲ್ಲಿ ಬ್ಲಾಕ್ ಎನಲ್ಲಿರುವ ಅಪಾರ್ಟ್ಮೆಂಟ್ನಲ್ಲಿ ಘಟನೆ ನಡೆದಿದೆ. ಟೆನ್ನಿಸ್ ಕೋಚರ್ ಆಗಿದ್ದ ಅಪ್ಪ ಡ್ಯೂಟಿಗೆ ಹೋದ ನಂತರ ಶುಕ್ರವಾರ ಸಂಜೆ 7.30ರ ಸಮಯಕ್ಕೆ ಅಮ್ಮ ಮಗಳ ಮಧ್ಯೆ ವಾಗ್ವಾದ ಶುರುವಾಗಿದೆ. ಈ ವೇಳೆ ತೀವ್ರವಾಗಿ ಕೋಪಗೊಂಡ ಮಗಳು ತನ್ನ ಹೆತ್ತ ತಾಯಿ ಎಂಬುದನ್ನು ಕೂಡ ಯೋಚಿಸದೇ ಕುಟ್ಟಾಣಿಯಿಂದ ಹೊಡೆದು ಕೊಂದೇ ಬಿಟ್ಟಿದ್ದಾಳೆ.
ಯುವತಿಯ ತಂದೆ ದೀಪ್ ಚಂದ್ ಪ್ರಸಾದ್ ಟೆನ್ನಿಸ್ ಕೋಚರ್ ಆಗಿದ್ದು, ಪುಟ್ಟ ಕುಟುಂಬ ಅಪಾರ್ಟ್ಮೆಂಟ್ನಲ್ಲಿ ಜೊತೆಯಾಗಿ ಬದುಕುತ್ತಿದ್ದರು. ಘಟನೆಯ ಬಳಿಕ ನೆರೆಮನೆಯವರು ಪೊಲೀಸರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು, ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ತಾನಿಯಾ ಕುಮಾರಿಯನ್ನು ಬಂಧಿಸಿದ್ದಾರೆ. ಈಗ ಪೊಲೀಸ್ ಕಸ್ಟಡಿಯಲ್ಲಿರುವ ಆಕೆಯನ್ನು ವಿಚಾರಣೆ ನಡೆಸಲಾಗುತ್ತಿದ್ದು, ಕೊಲೆಗೆ ಮೊದಲು ಏನು ನಡೆಯಿತು ಎಂಬ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ.
ಇದನ್ನೂ ಓದಿ : ಹೊಸೂರು ಟಾಟಾ ಫ್ಯಾಕ್ಟರಿಯಲ್ಲಿ ಭಾರೀ ಅಗ್ನಿ ಅವಘಡ – ಕೋಟ್ಯಾಂತರ ಮೌಲ್ಯದ ವಸ್ತುಗಳು ಸುಟ್ಟು ಭಸ್ಮ..!