ನ್ಯೂಯಾರ್ಕ್ ನಸೌ ಕೌಂಟಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಬಹುನಿರೀಕ್ಷಿತ 2024ರ ಐಸಿಸಿ ಮೆಗಾ ಟೂರ್ನಿ ಟಿ20 ವಿಶ್ವಕಪ್ ಹೈವೋಲ್ಟೇಜ್ ಪಂದ್ಯದಲ್ಲಿ ಪಾಕ್ ವಿರುದ್ಧ ಟೀಮ್ ಇಂಡಿಯಾ ರೋಚಕ ಗೆಲುವು ಸಾಧಿಸಿದೆ. ಇದರೊಂದಿಗೆ ಲೀಗ್ನಲ್ಲಿ ಸತತ ಎರಡನೇ ಗೆಲುವು ದಾಖಲಿಸಿದ ಟೀಂ ಇಂಡಿಯಾ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.
ಟೀಮ್ ಇಂಡಿಯಾ ನೀಡಿದ 119 ರನ್ಗಳ ಗುರಿಯನ್ನು ಬೆನ್ನತ್ತಿದ ಪಾಕ್ ತಂಡ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿ 6 ರನ್ನಿಂದ ಹೀನಾಯ ಸೋಲು ಕಂಡಿದೆ. ಲೀಗ್ನಲ್ಲಿ ಸತತ ಎರಡನೇ ಸೋಲು ಅನುಭವಿಸಿದ ಪಾಕ್ ತಂಡ ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲೇ ಉಳಿದುಕೊಂಡಿದೆ.
ಇನ್ನು, ಟೀಮ್ ಇಂಡಿಯಾ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ್ದು, ಓಪನರ್ ಆಗಿ ಬಂದ ಕ್ಯಾಪ್ಟನ್ ರೋಹಿತ್ ಶರ್ಮಾ ಕೇವಲ 12 ಬಾಲ್ನಲ್ಲಿ 13 ರನ್ ಗಳಿಸಿ ಶಾಹೀನ್ ಅಫ್ರಿದಿ ಬೌಲಿಂಗ್ನಲ್ಲಿ ಕ್ಯಾಚ್ ನೀಡಿ ಪೆವಿಲಿಯನ್ ತೆರಳಿದರು. ವಿರಾಟ್ ಕೊಹ್ಲಿ ಕೂಡ 3 ಬಾಲ್ನಲ್ಲಿ 4 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ರು. ಹಾಗಾಗಿ ಟೀಮ್ ಇಂಡಿಯಾಗೆ ಆರಂಭಿಕ ಆಘಾತ ಆಗಿತ್ತು.
ಕೊಹ್ಲಿ, ರೋಹಿತ್ ಔಟಾದ್ರೂ ಪಂತ್ ಮಾತ್ರ ತನ್ನ ಲಕ್ನಿಂದಲೇ ಬಚಾವ್ ಆಗಿದ್ದರು. ಬರೋಬ್ಬರಿ ಮೂರು ಬಾರಿ ಪಂತ್ ಕ್ಯಾಚ್ ಅನ್ನು ಪಾಕ್ ಆಟಗಾರರು ಕೈ ಚೆಲ್ಲಿದ್ರು. ಹಾಗಾಗಿ ಕೊನೆವರೆಗೂ ಕ್ರೀಸ್ನಲ್ಲೇ ನಿಂತು ಬ್ಯಾಟ್ ಬೀಸಿದ ಪಂತ್ 31 ಬಾಲ್ಗೆ 42 ರನ್ ಚಚ್ಚಿದ್ರು. ಇವರಿಗೆ ಸಾಥ್ ನೀಡಿದ್ದ ಅಕ್ಷರ್ ಪಟೇಲ್ 1 ಸಿಕ್ಸರ್, 2 ಫೋರ್ ಸಮೇತ 20 ರನ್ ಸಿಡಿಸಿದ್ರು. ಟೀಮ್ ಇಂಡಿಯಾ 19 ಓವರ್ಗೆ 119 ರನ್ಗೆ ಆಲೌಟ್ ಆಗಿತ್ತು.
ಗುರಿ ಬೆನ್ನಟ್ಟಿದ ಪಾಕಿಸ್ತಾನ ತಂಡ ಉತ್ತಮ ಆರಂಭದ ಹೊರತಾಗಿಯೂ ಸತತ ವಿಕೆಟ್ಗಳ ಪತನದ ಕಾರಣ ಹಾಗೂ ಟೀಮ್ ಇಂಡಿಯಾ ವೇಗಿಗಳ ದಾಳಿಯಿಂದಾಗಿ 20 ಓವರ್ಗಳಲ್ಲಿ 113 ರನ್ ಕಲೆಹಾಕಲಷ್ಟೇ ಶಕ್ತವಾಯಿತು. ಭಾರತದ ಪರ ಬುಮ್ರಾ ಮೂರು ವಿಕೆಟ್ ಪಡೆದು ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರೆ, ಹಾರ್ದಿಕ್ ಎರಡು ವಿಕೆಟ್, ಅರ್ಷದೀಪ್ ಮತ್ತು ಅಕ್ಷರ್ ತಲಾ ಒಂದು ವಿಕೆಟ್ ಪಡೆದರು.
ಇದನ್ನೂ ಓದಿ : ‘ತ್ರಿ’ ವಿಕ್ರಮನಾಗಿ ಪ್ರಧಾನಿ ಪಟ್ಟಕ್ಕೇರಿದ ಮೋದಿ – ನಮೋ 3.0 ದರ್ಬಾರ್ ಶುರು..!