ಬೆಂಗಳೂರು : ಆತ್ಮಹತ್ಯೆ ಮಾಡಿಕೊಂಡು ಇಹಲೋಕ ತ್ಯಜಿಸಿದ ನಿರ್ಮಾಪಕ ಸೌಂದರ್ಯ ಜಗದೀಶ್ ಅವರ ಅಗಲಿಕೆಗೆ ಕನ್ನಡ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ನಿನ್ನೆ ಬೆಳಗ್ಗೆ ಜಗದೀಶ್ ಅವರು ತಮ್ಮ ಬೆಂಗಳೂರಿನ ಮಹಾಲಕ್ಷ್ಮೀ ಲೇಔಟ್ನ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾದರು. ಬಳಿಕ ಎಂ.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಯಿತು. ಮಧ್ಯಾಹ್ನದ ವೇಳೆಗೆ ಸೌಂದರ್ಯ ಜಗದೀಶ್ ಅವರ ಮೃತದೇಹವನ್ನು ಮನೆಗೆ ತೆಗೆದುಕೊಂಡು ಬರಲಾಗಿತ್ತು. ನಟ ದರ್ಶನ್ ಶ್ರೀಮುರಳಿ, ಉಪೇಂದ್ರ, ಗುರುಕಿರಣ್, ತರುಣ್ ಸುಧೀರ್, ಸಾರಾ ಗೋವಿಂದು, ಕೆ. ಮಂಜು ಸೇರಿದಂತೆ ಸ್ಯಾಂಡಲ್ವುಡ್ನ ಅನೇಕ ಸೆಲೆಬ್ರಿಟಿಗಳು, ಗಣ್ಯರು ಬಂದು ಅಂತಿಮ ದರ್ಶನ ಪಡೆದಿದ್ದಾರೆ.
ಇಂದು (ಏಪ್ರಿಲ್ 15) ಚೆನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿರುವ ಫಾರ್ಮ್ ಹೌಸ್ನಲ್ಲಿ ಸೌಂದರ್ಯ ಜಗದೀಶ್ ಅವರ ಅಂತ್ಯಕ್ರಿಯೆ ನಡೆಯಲಿದೆ. ಬೆಳಗ್ಗೆ 9 ಗಂಟೆವರೆಗೆ ಅವರ ಮಹಾಲಕ್ಷ್ಮಿ ಲೇಔಟ್ ನಿವಾಸದಲ್ಲಿ ಸಾರ್ವಜನಿಕರು ಹಾಗೂ ಚಿತ್ರರಂಗದ ಮಂದಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ 12 ಗಂಟೆಯಿಂದ 1 ಗಂಟೆ ಒಳಗೆ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಉದ್ಯಮಿ, ನಿರ್ಮಾಪಕರಗಿದ್ದ ಸೌಂದರ್ಯ ಜಗದೀಶ್ ಅವರು ಚಿತ್ರರಂಗದ ಹಲವರ ಜೊತೆ ಒಡನಾಟ ಹೊಂದಿದ್ದರು. ಸೌಂದರ್ಯ ಜಗದೀಶ್ ಅವರ ನಿಧನದಿಂದ ಇದೀಗ ಚಿತ್ರರಂಗಕ್ಕೆ ಆಘಾತ ಉಂಟಾಗಿದೆ.
ಸೌಂದರ್ಯ ಜಗದೀಶ್ ಅವರ ಸಾವಿಗೆ ಸಂಬಂಧಿಸಿದಂತೆ ಕುಟುಂಬದವರು ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಳೆದ ಕೆಲವು ದಿನಗಳಿಂದ ಜಗದೀಶ್ ಅವರು ಆರ್ಥಿಕ ಸಂಕಷ್ಟ ಹಾಗೂ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹೆಚ್ಚು ಸಾಲ ಆಗಿತ್ತು. ಮರು ಪಾವತಿ ಮಾಡಲಾಗದೇ ನೊಂದಿದ್ದರು. ಕಳೆದ ತಿಂಗಳು ಸೌಂದರ್ಯ ಜಗದೀಶ್ ಅವರ ಅತ್ತೆ ನಿಧನರಾಗಿದ್ದರು. ಆ ಬಳಿಕ ಜಗದೀಶ್ ಮಾನಸಿಕವಾಗಿ ಕುಗ್ಗಿದ್ದರು. ಬಳಿಕ ಕುಟುಂಬದವರು ಕೌನ್ಸಲಿಂಗ್ ಮಾಡಿಸಿದ್ದರು. ಡಿಪ್ರೆಷನ್ಗೆ ಜಗದೀಶ್ ಅವರು ಔಷಧಿ ಸೇವಿಸುತ್ತಿದ್ದರು. ಕಳೆದು ಒಂದು ತಿಂಗಳಿಂದ ಒಂಟಿಯಾಗಿ ಮನೆಯಲ್ಲಿ ಇರುತ್ತಿದ್ದರು ಎಂಬುದು ತಿಳಿದು ಬಂದಿದೆ.
ಇದನ್ನೂ ಓದಿ : ಪ್ರಣಾಳಿಕೆಯನ್ನು ಈಡೇರಿಸುವ ಶಕ್ತಿ ಬಿಜೆಪಿಗಿಲ್ಲ, ಬಿಜೆಪಿಯದ್ದು ಕೇವಲ ಪೊಳ್ಳು ಭರವಸೆಗಳಷ್ಟೇ – ಸಿಎಂ ಸಿದ್ದರಾಮಯ್ಯ ವ್ಯಂಗ್ಯ..!