ಕೊಡಗು : ಲೋಕಸಭೆ ಚುನಾವಣೆ ಹೊಸ್ತಿಲಲ್ಲೇ ರಾಜಕೀಯ ವಲಯದಲ್ಲಿ ಭಾರೀ ಬೆಳವಣಿಗೆಯೊಂದು ನಡೆದಿದೆ. ಮಾಜಿ ಮುಖ್ಯಮಂತ್ರಿ, ಕಾಂಗ್ರೆಸ್ ಎಂಎಲ್‌ಸಿ ಜಗದೀಶ್ ಶೆಟ್ಟರ್ ಅವರು ಬಿಜೆಪಿಗೆ ಮರು ಸೇರ್ಪಡೆಯಾಗಿದ್ದಾರೆ. ಈ ವಿಚಾರ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.
ಇನ್ನು ಮತ್ತೊಂದೆಡೆ ಈ ಘಟನೆ ಸಂಬಂಧ ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ನಿನ್ನೆ ಬೆಳಗ್ಗೆ ಕೂಡ ಅವರ ಜೊತೆ ಮಾತನಾಡಿದ್ದೇನೆ. ಆದರೆ ಈಗ ಅವರು ದೆಹಲಿಯಲ್ಲಿ ಏನು ಮಾಡಿದ್ದಾರೆ ಗೊತ್ತಿಲ್ಲ. ಬಿಜೆಪಿಯವರು ಅವರಿಗೆ ಟಿಕೆಟ್ ಕೊಟ್ಟಿರಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಶೆಟ್ಟರ್ಗೆ ಯಾವುದೇ ಅನ್ಯಾಯ ಆಗಿಲ್ಲ ಎಂದಿದ್ದಾರೆ.
ಕೊಡಗಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ನಾವು ಅವರಿಗೆ ಟಿಕೆಟ್ ಕೊಟ್ಟಿದ್ದೆವು. ಚುನಾವಣೆಯಲ್ಲಿ ಸೋತರೂ ಶೆಟ್ಟರನ್ನು ಎಂಎಲ್‌ಸಿ ಮಾಡಿದ್ದೆವು. ಕಾಂಗ್ರೆಸ್ ಪಕ್ಷದಲ್ಲಿ ಅವರಿಗೆ ಯಾವುದೇ ಅನ್ಯಾಯ ಆಗಿಲ್ಲ. ಒಮ್ಮೆ ಅವರು ನನಗೆ ಬಿಜೆಪಿಯಲಿ ಅವಮಾನ ಆಗಿದೆ ಮತ್ತೆ ಹೋಗಲ್ಲ ಎಂದಿದ್ದರು ಎಂದು ತಿಳಿಸಿದ್ದಾರೆ.
ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ – ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್ ಅವರು ನನಗೆ ಇನ್ನೂ ರಾಜೀನಾಮೆ ಪತ್ರ ತಲುಪಿಲ್ಲ. ಕಾಂಗ್ರೆಸ್ ಪಕ್ಷ ಮರುಜೀವಿ ಕೊಟ್ಟಿದೆ ಕಾಂಗ್ರೆಸ್ ಪಕ್ಷ ಬಿಟ್ಟು ಹೋಗಲ್ಲ ಎಂದು ಜಗದೀಶ್ ಶೆಟ್ಟರ್ ಹೇಳಿದ್ರು. ಬಿಜೆಪಿ ವಿರುದ್ಧ ಬಹಳಷ್ಟು ಹೇಳಿಕೆಗಳನ್ನ ಕೊಟ್ಟಿದ್ದಾರೆ. ಈಗ ದೆಹಲಿಗೆ ಹೋಗಿ ಬಿಜೆಪಿಗೆ ಸೇರಿಕೊಂಡಿದ್ದಾರೆ. ನಿನ್ನೆ ನಾನು ಕೇಳಿದಾಗ ಬಿಜೆಪಿಗೆ ಹೋಗಲ್ಲ ಎಂದಿದ್ರು. ಬಿಜೆಪಿ ಒಳ್ಳೆಯದಲ್ಲಾ ಅಂತಲೂ ನನ್ನ ಬಳಿ ಹೇಳಿದ್ರು. ನಾವು ಏನ್ ಭರವಸೆ ಕೊಟ್ಟಿದ್ದೆವೋ ಈಡೇರಿಸಿದ್ದೇವೆ. ಬಿಜೆಪಿಯವರು ಏನ್ ಆಮಿಷವೊಡ್ಡಿದ್ದಾರೋ ಗೊತ್ತಿಲ್ಲ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಚುನಾವಣೆಯಲ್ಲಿ 35 ಸಾವಿರ ಮತಗಳಿಂದ ಸೋತಾಗಲೂ ಕಾಂಗ್ರೆಸ್ ಪಕ್ಷ ಜಗದೀಶ್ ಶೆಟ್ಟರ್ ಅವರನ್ನು ಗೌರವದಿಂದ ನಡೆಸಿಕೊಂಡು ಎಂಎಲ್‌ಸಿ ಮಾಡಿದ್ದೇವೆ. ಒತ್ತಡದಿಂದ ಬಿಜೆಪಿ ಪಕ್ಷಕ್ಕೆ ಹೋಗಿದ್ದಾರಾ ಇಲ್ಲವೋ ಗೊತ್ತಿಲ್ಲ. ಅಂದು ಟಿಕೆಟ್ ತಪ್ಪಿದಾಗ ದೇಶದ ಹಿತ ನೆನಪಿರಲಿಲ್ಲವಾ? ಜಗದೀಶ್ ಶೆಟ್ಟರ್ ಅವರು ನಮ್ಮ ವಿಶ್ವಾಸಕ್ಕೆ ಧಕ್ಕೆ ತಂದಿದ್ದಾರೆ ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಇದನ್ನೂ ಓದಿ : ಶೆಟ್ಟರ್ ಬೆನ್ನಲ್ಲೇ ಲಕ್ಷ್ಮಣ ಸವದಿ ಬಿಜೆಪಿ ಸೇರ್ತಾರಾ..?