ಬೆಂಗಳೂರು : ಕನ್ನಡಿಗರಿಂದ ಬಾಯ್ಕಾಟ್ ಫೋನ್ ಪೇ ಅಭಿಯಾನ, ಇದರ ಬೆನ್ನಲ್ಲೇ ಫೋನ್‌ಪೇ ರಾಯಭಾರಿ ನಟ ಕಿಚ್ಚ ಸುದೀಪ್ ಒಪ್ಪಂದ ಕಡಿತಗೊಳಿಸುವ ಮಾತುಗಳು ಕೇಳಿಬರುತ್ತಿದ್ದಂತೆ ಫೋನ್‌ಪೇ ಬೆಚ್ಚಿ ಬಿದ್ದಿದ್ದು, ಇದೀಗ ಬೇಷರತ್ ಕ್ಷಮೆಯಾಚಿಸಿದೆ. ಇಷ್ಟೇ ಅಲ್ಲದೆ ಕನ್ನಡ, ಕರ್ನಾಟಕ, ಇಲ್ಲಿನ ಜನ, ಸಂಸ್ಕೃತಿ ಬಗ್ಗೆ ಅಪಾರ ಗೌರವವಿದ್ದು, ಸರ್ಕಾರದ ನಿಲುವಿಗೆ ಬದ್ಧ ಎಂದು ಫೋನ್‌ಪೇ ಸಂಸ್ಥಾಪಕ ಹಾಗೂ ಸಿಇಒ ಸಮೀರ್ ನಿಮಗ್ ಅಧಿಕೃತವಾಗಿ ಕ್ಷಮೆ ಕೇಳಿದ್ದಾರೆ. ವ್ಯಾಪಕ ಆಕ್ರೋಶದ ಬೆನ್ನಲ್ಲೇ ಎಚ್ಚೆತ್ತ ಫೋನ್ ಪೇ ಕನ್ನಡಿಗರೆದುರು ಮಂಡಿಯೂರಿದೆ.
ಈ ಕುರಿತು ಟ್ವೀಟ್ ಮಾಡಿರೋ ಪೋನ್ ಪೇ ಸಿಇಒ ಸಮೀರ್ ನಿಗಮ್ ಅವರು “ಕರ್ನಾಟಕ, ಕನ್ನಡಿಗರನ್ನು ಅವಮಾನಿಸುವ ಉದ್ದೇಶವಿರಲಿಲ್ಲ. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ಯಾರದ್ದಾದರೂ ಭಾವನೆಗಳಿಗೆ ಧಕ್ಕೆಯಾಗಿದ್ದರೆ ಕ್ಷಮೆಯಾಚಿಸುವೆ. ಸಮಸ್ತ ಕರುನಾಡಿನ ಜನರಲ್ಲಿ ಕ್ಷಮೆಯಾಚಿಸುತ್ತೇನೆಂದು ಹೇಳಿದ್ದಾರೆ.
ಕರ್ನಾಟಕದಲ್ಲಿ ಖಾಸಗಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಮಸೂದೆಗೆ ಸಂಬಂಧಿಸಿದಂತೆ ಕಳೆದ ವಾರ ನಾನು ನೀಡಿದ ವೈಯಕ್ತಿಕ ಹೇಳಿಕೆಗೆ ಸಂಬಂಧಿಸಿದಂತೆ ತೀವ್ರ ವಿರೋಧ ವ್ಯಕ್ತವಾಗಿರುವುದನ್ನು ಮಾಧ್ಯಮ ವರದಿಗಳನ್ನು ಓದಿದ್ದೇನೆ. ಕರ್ನಾಟಕವನ್ನು ಮತ್ತು ಕನ್ನಡಿಗರನ್ನು ಅವಮಾನಿಸುವುದು ನನ್ನ ಉದ್ದೇಶವಾಗಿರಲಿಲ್ಲ ಎಂಬುವುದನ್ನು ಪ್ರಮುಖವಾಗಿ ಸ್ಪಷ್ಟಪಡಿಸಲು ಬಯಸುತ್ತೇನೆ.
ನನ್ನ ಹೇಳಿಕೆಯಿಂದ ಯಾರದ್ದಾದರೂ ಭಾವನೆಗಳಿಗೆ ನೋವುಂಟುಮಾಡಿದರೆ, ನಾನು ನಿಜವಾಗಿಯೂ ಕ್ಷಮೆಯಾಚಿಸುತ್ತೇನೆ ಮತ್ತು ನಿಮಗೆ ಬೇಷರತ್ ಕ್ಷಮೆಯನ್ನು ಕೇಳಲು ಬಯಸುತ್ತೇನೆ. ಕನ್ನಡ ಮತ್ತು ಇತರೆ ಎಲ್ಲಾ ಭಾರತೀಯ ಭಾಷೆಗಳ ಬಗ್ಗೆ ನನಗೆ ಹೆಚ್ಚಿನ ಗೌರವವಿದೆ. ವಾಸ್ತವವಾಗಿ, ಭಾಷಾ ವೈವಿಧ್ಯತೆ ಮತ್ತು ಶ್ರೀಮಂತ ಸಾಂಸ್ಕೃತಿಕ ಪರಂಪರೆಯು ಎಲ್ಲಾ ಭಾರತೀಯರು ಹೆಮ್ಮೆಪಡಬೇಕಾದ ರಾಷ್ಟ್ರೀಯ ಆಸ್ತಿಯಾಗಿದೆ ಎಂದು ನಾನು ನಿಜವಾಗಿಯೂ ನಂಬುತ್ತೇನೆ. ಎಲ್ಲಾ ಭಾರತೀಯರು ಸ್ಥಳೀಯ ಮತ್ತು ಸಾಂಸ್ಕೃತಿಕ ಮಾನದಂಡಗಳನ್ನು ಗೌರವಿಸಬೇಕು ಮತ್ತು ಆಚರಿಸಬೇಕು ಎಂದಿದ್ದಾರೆ.