ಚಿತ್ರದುರ್ಗ : ದರ್ಶನ್ ಗ್ಯಾಂಗ್ನಿಂದ ರೇಣುಕಾಸ್ವಾಮಿ ಹತ್ಯೆ ನಡೆದು ನಾಲ್ಕು ತಿಂಗಳು ಕಳೆದಿದೆ. ಈ ಪ್ರಕರಣ ಸದ್ಯ ಕೋರ್ಟ್ ಅಂಗಳದಲ್ಲಿ ಇದೆ. ರೇಣುಕಾ ಸ್ವಾಮಿ ನಿಧನ ಹೊಂದುವಾಗ ಅವರ ಪತ್ನಿ ಸಹನಾಗೆ ಐದು ತಿಂಗಳಾಗಿತ್ತು.. ಈಗ ಅವರು ಗಂಡುಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರ ಕುಟುಂಬದವರಿಗೆ ಸಂತಸ ತಂದಿದೆ. ಇಂದು ಬೆಳಿಗ್ಗೆ 5 ಗಂಟೆ ಸುಮಾರಿಗೆ ಗಂಡು ಮಗುವಿಗೆ ಸಹನಾ ಜನ್ಮ ನೀಡಿದ್ದಾರೆ.
ರೇಣುಕಾ ಸ್ವಾಮಿ ಕೊಲೆಯ ಬಳಿಕ ಇಡೀ ಕುಟುಂಬ ಕಣ್ಣೀರಲ್ಲೇ ಕೈ ತೊಳೆಯುತ್ತಾ ಬಂದಿದ್ದು, ‘ಮಗ ಕೈ ಮುಗಿದು ಕೇಳಿಕೊಂಡಾಗ ಅವರು ಬಿಟ್ಟುಬಿಡಬೇಕಿತ್ತು’ ಎಂದು ರೇಣುಕಾ ಸ್ವಾಮಿ ತಂದೆ-ತಾಯಿ ಕಣ್ಣೀರು ಹಾಕಿದ್ದರು. ಅಲ್ಲದೆ, ದರ್ಶನ್ಗೆ ಒಳ್ಳೆಯದಾಗಲ್ಲ ಎಂದು ಶಾಪ ಕೂಡ ಹಾಕಿದ್ದರು. ಈಗ ನೊಂದಿದ್ದ ಕುಟುಂಬಕ್ಕೆ ಖುಷಿ ಸುದ್ದಿ ಸಿಕ್ಕಿದೆ. ರೇಣುಕಾಸ್ವಾಮಿ ಪತ್ನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಚಿತ್ರದುರ್ಗ ನಗರದ ಜೆಸಿಆರ್ ಬಡಾವಣೆಯಲ್ಲಿರುವ ಕೀರ್ತಿ ಆಸ್ಪತ್ರೆಯಲ್ಲಿ ಸಹನಾಗೆ ಹೆರಿಗೆ ಆಗಿದೆ.
ನಿಗದಿತ ದಿನಾಂಕಕ್ಕಿಂತ ಒಂದು ವಾರ ಮೊದಲೇ ಮಗು ಜನನ ಹಿನ್ನೆಲೆ ಮಗುವನ್ನು ವೈದ್ಯಾಧಿಕಾರಿಗಳು ಅಬ್ಜರ್ವೇಶನ್ ನಲ್ಲಿ ಇಟ್ಟಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದಾರೆ. ಅಲ್ಲದೆ ಕೀರ್ತಿ ಆಸ್ಪತ್ರೆಯಿಂದ ಡಾ.ಮಲ್ಲಿಕಾರ್ಜುನ್ ಸಂಪೂರ್ಣ ಉಚಿತ ಚಿಕಿತ್ಸೆ ನೀಡಿದ್ದಾರೆ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ. ಸದ್ಯ ಮೃತ ರೇಣುಕಾಸ್ವಾಮಿ ಕುಟುಂಬಸ್ಥರಲ್ಲಿ ಸಂಭ್ರಮ ಮನೆ ಮಾಡಿದೆ.
ಇದನ್ನೂ ಓದಿ : ಮಹಾಮಳೆಗೆ ಸಿಲಿಕಾನ್ ಸಿಟಿ ತತ್ತರ – ಹಲವೆಡೆ ರಸ್ತೆಗಳೇ ಮಾಯ, ಜನಜೀವನ ಅಸ್ತವ್ಯಸ್ತ.. ಎಲ್ಲೆಲ್ಲಿ ಏನೇನಾಯ್ತು?