ಬೆಂಗಳೂರು : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ರಾಜ್ಯ ರಾಜಧಾನಿ ಬೆಂಗಳೂರಿಗೆ ದೊಡ್ಡ ಮಳೆಯನ್ನೇ ಹೊತ್ತುತಂದಿದೆ. ಸೋಮವಾರ ಸಂಜೆಯಿಂದಲೂ ಶುರುವಾಗಿದ್ದ ಮಳೆ ಮಂಗಳವಾರ ಸಂಜೆವರೆಗೂ ಒಂದೇ ಸಮನೇ ಧಾರಾಕಾರವಾಗಿ ಸುರಿದಿದೆ. ನಗರದಲ್ಲಿ ವರುಣಾರ್ಭಟ ಇನ್ನು ಹೆಚ್ಚುತ್ತಲೇ ಇದ್ದು, ಅಕ್ಟೋಬರ್ 17ರವರೆಗೂ ಬೆಂಗಳೂರಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದ್ದು, ರಸ್ತೆಗಳು ಜಲಾವೃತವಾಗಿದೆ. ಇದು ಬ್ರಾಂಡ್ ಬೆಂಗಳೂರು ಅಲ್ಲ, ಮೋರಿ ಬೆಂಗಳೂರು ಎಂದು ವಾಹನ ಸವಾರರು ಕಿಡಿಕಾರುತ್ತಿದ್ದಾರೆ.
ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ರಸ್ತೆಯೇ ಮಾಯ : ವಿಶ್ವದ ದೈತ್ಯ ಐಟಿ ಕಂಪನಿಗಳು ವಾಸ್ತವ್ಯ ಹೂಡಿರುವ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ರಸ್ತೆಯೇ ಕಾಣದಾಂತಾಗಿತ್ತು. ಮಂಡಿ ಮಟ್ಟಕ್ಕೆ ತುಂಬಿದ್ದ ನೀರಿನಲ್ಲೇ ಬೈಕ್, ಕಾರು, ಆಟೋಗಳು ನಿನ್ನೆ ಸಂಚಾರ ಮಾಡುವಂತಾಗಿತ್ತು.
ಸದ್ಯ ಕೆರೆಯಂತಾಗಿದ್ದ ಮಾನ್ಯತಾ ಟೆಕ್ ಪಾರ್ಕ್ ರಸ್ತೆ ಮಳೆ ನೀರನ್ನು ತೆರವು ಮಾಡಲಾಗಿದೆ. ಮಳೆ ನೀರು ತೆರವುಗೊಳಿಸಲು ಮಾನ್ಯತಾ ಟೆಕ್ ಪಾರ್ಕ್ ಸಿಬ್ಬಂದಿ ಹರಸಾಹಸ ಪಟ್ಟಿದ್ದಾರೆ. ನಿರ್ಮಾಣ ಹಂತದ ಬಹುಮಹಡಿ ಕಟ್ಟಡದ ಆವರಣದಲ್ಲಿ ಮಣ್ಣು ಕುಸಿತವಾಗಿದ್ದು, ವೀರಣ್ಣನ ಪಾಳ್ಯದಿಂದ ಬರುವ ಮಳೆ ನೀರು ಟೆಕ್ ಪಾರ್ಕ್ ಒಳಗೆ ನುಗ್ಗಿದೆ. ಹಾಗಾಗಿ ಮಾನ್ಯತಾ ಟೆಕ್ ಪಾರ್ಕ್ ರಸ್ತೆಯಲ್ಲಿ 4 ಅಡಿಗಳವರೆಗೆ ನೀರು ಸಂಗ್ರಹವಾಗಿತ್ತು.
ಇನ್ನು ಮಾನ್ಯತಾ ಟೆಕ್‌ಪಾರ್ಕ್ ಬಳಿ ರಸ್ತೆ ಬದಿಯೇ ಬೃಹತ್ ಕಟ್ಟಡ ಕಾಮಗಾರಿ ನಡೆಯುತ್ತಿದೆ. 30 ಅಡಿಯಷ್ಟು ನೆಲ ಅಗೆಯಲಾಗಿದ್ದು, ರಸ್ತೆ ಪಕ್ಕದಲ್ಲೇ ಕ್ಷಣಕ್ಷಣ ಭೂಮಿ ಕುಸಿಯುತ್ತಿದೆ. ನೋಡ ನೋಡುತ್ತಿದ್ದಂತೆಯೇ ಕಾಂಪೌಂಡ್ ಕೂಡಾ ಕುಸಿದು ಬಿದ್ದಿದ್ದು, ಸವಾರರು ಜೀವಭಯದಲ್ಲೇ ಸಂಚರಿಸುತ್ತಿದ್ದಾರೆ. ಬೆಳ್ಳಂದೂರು ಕೆರೆ ರಸ್ತೆ ಕೂಡಾ ಈಗ ಕೆರೆಯಂತೆಯೇ ಆಗಿದೆ. ರಸ್ತೆ ಮೇಲೆ 2 ಅಡಿಯಷ್ಟು ನೀರು ನಿಂತಿದ್ದು ಸವಾರರು ಅದರಲ್ಲೇ ಸರ್ಕಸ್ ಮಾಡುತ್ತಾ ಸಾಗುತ್ತಿದ್ದಾರೆ.
ಹೆಣ್ಣೂರು ಬಾಗಲೂರು ಮುಖ್ಯ ರಸ್ತೆ ಹಾಗೂ ವಡ್ಡರಪಾಳ್ಯ ಸಾಯಿ ಬಡಾವಣೆಯ ರಸ್ತೆ ಸಂಪೂರ್ಣ ಜಲಾವೃತ ಆಗಿದ್ದು, ಪಾಲಿಕೆ ವಿರುದ್ಧ ಜನ ಆಕ್ರೋಶಗೊಂಡಿದ್ದಾರೆ. ಆರ್.ಆರ್.ನಗರದ ಕೆರೆಗೋಡಿ ರಸ್ತೆ, ಸರ್ಜಾಪುರ ರಸ್ತೆ, ಏರ್‌ಪೋರ್ಟ್ ರಸ್ತೆಯಲ್ಲಿ ಗುಂಡಿಗಳಿಂದ ಸವಾರರು ಹೈರಾಣಾಗಿದ್ದಾರೆ.
ರಾಜ್‌ಕುಮಾರ್ ಸಮಾಧಿ ರಸ್ತೆಯಲ್ಲಿ ಉರುಳಿಬಿದ್ದ ಬೃಹತ್ ಮರ : ಬೆಂಗಳೂರು ನಗರದ ಗೊರಗುಂಟೆಪಾಳ್ಯ ಬಳಿಯ ರಾಜಕುಮಾರ್ ರಸ್ತೆಯಲ್ಲಿ ಬೃಹತ್ ಮರವೊಂದು ಉರುಳಿ ಬಿದ್ದಿದ್ದು, ಟೆಂಪೊ, ಕಾರು ಜಖಂ ಆಗಿದ್ದವು. ಮರ ಬಿದ್ದಿದ್ದರಿಂದ ಟ್ರಾಫಿಕ್‌ಜಾಮ್ ಉಂಟಾಗಿ ಸವಾರರು ಪರದಾಡುವಂತಾಯಿತು.
ವಿದ್ಯಾರಣ್ಯಪುರದಲ್ಲಿಯೂ ನೆಲಕ್ಕುರುಳಿದ ಮರಗಳು : ಬೆಂಗಳೂರು ನಗರದ ಹೆಚ್ಎಂಟಿ ಲೇಔಟ್, ವಿದ್ಯಾರಣ್ಯಪುರದಲ್ಲಿ ಮರಗಳು ನೆಲಕ್ಕುರುಳಿದವು. ಇದರಿಂದ ಕೆಲಕಾಲ ಸವಾರರು ಪರದಾಡುವಂತಾಯಿತು. ಬಳಿಕ ಬಿಬಿಎಂಪಿ ಸಿಬ್ಬಂದಿ ನೆಲಕ್ಕುರುಳಿದ್ದ ಮರ ತೆರವು ಮಾಡಿದರು.
ಇಂದು ಶಾಲೆಗಳಿಗೆ ರಜೆ.. ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ : ಮಳೆ ಆರ್ಭಟದಿಂದ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳಲ್ಲಿ ಇಂದು ರಜೆ ಘೋಷಣೆ ಮಾಡಲಾಗಿದೆ. ಬೆಂಗಳೂರು ನಗರ ಜಿಲ್ಲೆಯಲ್ಲಿ ಅಂಗನವಾಡಿ, ಪ್ರಾಥಮಿಕ, ಪ್ರೌಢ ಶಾಲೆಗಳಿಗೆ ರಜೆ ನೀಡಲಾಗಿದ್ದರೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಂಗನವಾಡಿಗಳಿಗೆ ಮಾತ್ರ ರಜೆ ನೀಡಲಾಗಿದೆ. ಅದರಂತೆ ಐಟಿ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂಗೆ ಅನುಮತಿ ನೀಡಲಾಗಿದೆ ಎಂದು ಇನೋವೇಷನ್ & ಟೆಕ್ನಾಲಜಿ ಸೊಸೈಟಿ ಸುತ್ತೋಲೆ ಹೊರಡಿಸಿದೆ.
ಇದನ್ನೂ ಓದಿ : ಚನ್ನಪಟ್ಟಣ ಡೇಟ್ ಫಿಕ್ಸ್ ಬೆನ್ನಲ್ಲೇ ಬೆಂಕಿ ಬೆಳವಣಿಗೆ – ಇಂದೇ ಬಂಡಾಯದ ಕಹಳೆ ಮೊಳಗಿಸ್ತಾರಾ ಸಿ.ಪಿ.ಯೋಗೇಶ್ವರ್?