ಹೈದ್ರಾಬಾದ್ : ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ-2’ ಸಿನಿಮಾ ಗಲ್ಲಾ ಪೆಟ್ಟಿಗೆಯಲ್ಲಿ 1,500 ಕೋಟಿ ಗಳಿಸಿ ಮುನ್ನುಗ್ಗುತ್ತಿದೆ. ಡಿಸೆಂಬರ್ 4 ರಂದು ಹೈದ್ರಾಬಾದ್ನ ಸಂಧ್ಯಾ ಥಿಯೇಟರ್ನಲ್ಲಿ ‘ಪುಷ್ಪ-2’ ಸಿನಿಮಾ ಪ್ರೀಮಿಯರ್ ಶೋ ವೇಳೆ ಸಂಭವಿಸಿದ ಮಹಿಳೆ ರೇವತಿ ಕಾಲ್ತುಳಿತ ಪ್ರಕರಣ ಭಾರೀ ಕೋಲಾಹಲ ಎಬ್ಬಿಸಿತ್ತು. ಮೃತ ರೇವತಿ ಕುಟುಂಬಕ್ಕೆ ನಟ ಅಲ್ಲು ಅರ್ಜುನ್ 50 ಲಕ್ಷ ಪರಿಹಾರ ಘೋಷಿಸಿ ಸಾಂತ್ವನ ಕೂಡ ಹೇಳಿದ್ದರು.
ಘಟನೆ ಬಳಿಕ ಅಲ್ಲು ಅರ್ಜುನ್ ಅವರನ್ನು ಪೊಲೀಸರು ಬಂಧಿಸಿ ಜೈಲುಗಟ್ಟಿದ್ದರು. ನ್ಯಾಯಾಲಯ ಜಾಮೀನು ಮಂಜೂರು ಮಾಡಿದ್ದಕ್ಕೆ ಜೈಲಿಂದ ರಿಲೀಸ್ ಆಗಿದ್ದರು. ಇಷ್ಟೆಲ್ಲಾ ಆದ್ರೂ ಕೂಡ ಅಲ್ಲು ಅರ್ಜುನ್ ವಿರುದ್ಧ ಅಸಮಾಧಾನ, ಪ್ರತಿಭಟನೆಗಳು ನಿಂತಿರಲಿಲ್ಲ. ಮೊನ್ನೆ ತಾನೇ ಅಲ್ಲು ಅರ್ಜುನ್ ನಿವಾಸಕ್ಕೆ ನುಗ್ಗಿದ ಪ್ರತಿಭಟನಾಕಾರರರು ಮನೆ ಬಳಿ ರಾದ್ಧಾಂತ ಮಾಡಿದ್ದರು. ಮೃತ ಮಹಿಳೆಗೆ ಹೆಚ್ಚಿನ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದರು.
ಸಾವಿರಾರು ಕೋಟಿ ರೂಪಾಯಿ ಗಳಿಸಿದ ‘ಪುಷ್ಪ-2’ ಸಿನಿಮಾ ತಂಡದವರು ಚಿತ್ರಮಂದಿರದಲ್ಲಿ ಅಭಿಮಾನಿ ಮೃತಪಟ್ಟಿದ್ದಕ್ಕೆ ಕೇವಲ 50 ಲಕ್ಷ ರೂಪಾಯಿ ಪರಿಹಾರ ನೀಡಿದ್ದಕ್ಕೆ ಹಲವೆಡೆ ಆಕ್ರೋಶ ಭುಗಿಲೆದ್ದಿತ್ತು. ಇದೀಗ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಮೃತ ಮಹಿಳೆ ಕುಟುಂಬಕ್ಕೆ 1 ಕೋಟಿ ರೂಪಾಯಿ ಪರಿಹಾರ ಘೋಷಿಸಿದ್ದಾರೆ, ಜೊತೆಗೆ ‘ಪುಷ್ಪ-2’ ಸಿನಿಮಾ ನಿರ್ಮಾಪಕರು 50 ಲಕ್ಷ ರೂ., ‘ಪುಷ್ಪ-2’ ಸಿನಿಮಾ ನಿರ್ದೇಶಕರು 50 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಜೊತೆಗೆ ಗಾಯಾಳು ಮಗ ಶ್ರೀತೇಜ್ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನೂ ಕೂಡ ಚಿತ್ರದಂಡ ನೋಡಿಕೊಳ್ಳಲಿದೆ.
ಗಂಭೀರವಾಗಿ ಗಾಯಗೊಂಡಿರುವ ಶ್ರೀತೇಜ್ ಅವರನ್ನು ನಿರ್ಮಾಪಕ ದಿಲ್ ರಾಜು, ಅಲ್ಲು ಅರವಿಂದ್ ಮತ್ತು ಪುಷ್ಪ ನಿರ್ಮಾಪಕ ಎಲಮಂಚಿಲಿ ರವಿ ಭೇಟಿ ಮಾಡಿ ರೇವತಿ ಕುಟುಂಬಕ್ಕೆ 2 ಕೋಟಿ ಪರಿಹಾರ ಘೋಷಿಸಿದ್ದಾರೆ.
ಇದನ್ನೂ ಓದಿ : ಹಬ್ಬದ ದಿನದಂದೇ ಪ್ರೀತಿಯ ಮಗನನ್ನ ಕಳೆದುಕೊಂಡ ತ್ರಿಶಾ – ನಟಿಯ ಜೀವನವೇ ಮುಗಿದೋಯ್ತಾ?