ಸಾಮಾಜಿಕ ಕಳಕಳಿಯ ಜೊತೆಗೆ ಸಮಾಜಕ್ಕೆ ಒಂದು ಉತ್ತಮ ಸಂದೇಶವನ್ನು ಹೊತ್ತು ತರುತ್ತಿದೆ ‘ವಿಕಾಸ ಪರ್ವ’. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನೆರವೇರಿತು. ಕನ್ನಡದ ಹಿರಿಯ ನಟ ಪ್ರಣಯರಾಜ ಶ್ರೀನಾಥ್ “ವಿಕಾಸ ಪರ್ವ” ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.
ಈ ಸಂದರ್ಭದಲ್ಲಿ ಚಿತ್ರದ ಹಾಡುಗಳನ್ನು ಪ್ರದರ್ಶಿಸಲಾಯಿತು. ಹಾಡು ಬರೆದಿರುವ ಡಾ||ವಿ.ನಾಗೇಂದ್ರಪ್ರಸಾದ್ ಹಾಗೂ ಆಡಿಯೋ ಹಕ್ಕು ಪಡೆದಿರುವ ಲಹರಿ ಸಂಸ್ಥೆಯ ವೇಲು ಅವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ನಂತರ ಚಿತ್ರತಂಡದ ಸದಸ್ಯರು “ವಿಕಾಸ ಪರ್ವ” ದ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ ವಿಶೃತ್ ನಾಯಕ್ ಅವರು, ‘ವಿಕಾಸ ಪರ್ವ’ ಉತ್ತಮ ಸಂದೇಶವಿರುವ ಚಿತ್ರ. ನಾನೇ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದೇನೆ. ಕಿರುತೆರೆಯಲ್ಲಿ ತಮ್ಮದೇ ಆದ ಚಾಪು ಮೂಡಿಸಿರುವ ರೋಹಿತ್ ನಾಗೇಶ್ ಈ ಚಿತ್ರದ ಪ್ರಮುಖಪಾತ್ರದಲ್ಲಿ ಅಭಿನಯಿಸಿದ್ದಾರೆ. ಸ್ವಾತಿ, ನಿಶಿತಾ ಗೌಡ, ಅಶ್ವಿನ್ ಹಾಸನ್, ಬಿಲ್ವ, ಬಲ ರಾಜವಾಡಿ, ಕುರಿಬಾಂಡ್ ರಂಗ, ಅಭಯ್ ಸುವರ್ಣ ಮುಂತಾದವರು ತಾರಾಬಳಗದಲ್ಲಿದ್ದಾರೆ. ಮೈಂಡ್ ಥಾಟ್ಸ್ ಮೀಡಿಯಾ ಲಾಂಛನದಲ್ಲಿ ಸಮೀರ್ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಅನ್ಬು ಅರಸ್ ನಿರ್ದೇಶಿಸಿದ್ದಾರೆ. ಎಲ್ಲರ ಮನಸ್ಸಿಗೂ ಹತ್ತಿರವಾಗುವ ಚಿತ್ರ ಇದಾಗಲಿದೆ. ಈಗಾಗಲೇ ಸೆನ್ಸಾರ್ ಕೂಡ ಮುಗಿದು ಚಿತ್ರ ಬಿಡುಗಡೆಯ ಹೊಸ್ತಿಲಿನಲ್ಲಿದೆ. ಸದ್ಯದಲ್ಲೇ ಬಿಡುಗಡೆಯಾಗಲಿದೆ ಎಂದು ಚಿತ್ರದ ಕಾರ್ಯಕಾರಿ ನಿರ್ಮಾಪಕರೂ ಆಗಿರುವ ರಾಜ್ಯ ಪ್ರಶಸ್ತಿ ವಿಜೇತ ವಿಶೃತ್ ನಾಯಕ್ ತಿಳಿಸಿದರು.
ಇನ್ನು ನಿರ್ದೇಶಕ ಅನ್ಬು ಅರಸ್, ಚಿತ್ರತಂಡದ ಸಹಕಾರದಿಂದ “ವಿಕಾಸ ಪರ್ವ” ಚಿತ್ರ ಚೆನ್ನಾಗಿ ಮೂಡಿಬಂದಿದೆ. ನಮ್ಮ ಚಿತ್ರಕ್ಕೆ ಎಲ್ಲರ ಪ್ರೋತ್ಸಾಹವಿರಲಿ ಎಂದು ತಿಳಸಿದರು.
ನಟ ರೋಹಿತ್ ನಾಗೇಶ್ ಮಾತನಾಡಿ, ವಿಶೃತ್ ನಾಯಕ್ ಅವರು ಒಳ್ಳೆಯ ಕಥೆ ಮಾಡಿದ್ದಾರೆ. ಈ ಚಿತ್ರದ ಕುರಿತು ಒಂದು ಮಾತು ಹೇಳಬಹುದು. ಚಿತ್ರ ನೋಡುವವರಿಗೆ ಬೇಸರವಾಗಲ್ಲ. ನೋಡಿದ ಮೇಲೆ ಯಾರು ನಮಗೆ ಬಯ್ಯುವುದಿಲ್ಲ. ಅಂತಹ ಉತ್ತಮ ಸಿನಿಮಾವಿದು. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಶ್ರೀನಾಥ್ ಅವರಿಗೆ ಹಾಗೂ ಆಗಮಿಸಿರುವ ಎಲ್ಲಾ ಅತಿಥಿಗಳಿಗೆ ಧನ್ಯವಾದ ತಿಳಿಸಿದರು.
ಛಾಯಾಗ್ರಹಣದ ಬಗ್ಗೆ ಛಾಯಾಗ್ರಾಹಕ ನವೀನ್ ಸುವರ್ಣ ಹಾಗೂ ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಎ ಪಿ ಓ ಮಾಹಿತಿ ನೀಡಿದರು. ನಟಿ ಸ್ವಾತಿ, ನಟರಾದ ಅಶ್ವಿನ್ ಹಾಸನ್, ಕುರಿಬಾಂಡ್ ತಮ್ಮ ಪಾತ್ರದ ಕುರಿತು ಮಾತನಾಡಿದರು. ಈ ಸಮಾರಂಭದಲ್ಲಿ ಕನ್ನಡವೇ ಸತ್ಯ ರಂಗಣ್ಣ, ವೀರಕಪುತ್ರ ಶ್ರೀನಿವಾಸ್ ಮುಂತಾದ ಗಣ್ಯರು ಭಾಗಿಯಾಗಿದ್ದರು.
ಇದನ್ನೂ ಓದಿ : ರಾಜ್ಯದಲ್ಲಿ ‘ಭೀಮ’ನ ಅಬ್ಬರ – ಫಸ್ಟ್ ಡೇ.. ಫಸ್ಟ್ ಶೋ ಹೌಸ್ಫುಲ್ ಪ್ರದರ್ಶನ..!