ಒಂದು ಸರಳ ಪ್ರೇಮಕಥೆ ಚಿತ್ರದ ಬಳಿಕ ದೊಡ್ಮನೆ ಕುಡಿ ವಿನಯ್ ರಾಜ್ಕುಮಾರ್ ನಟಿಸುತ್ತಿರುವ ಬಹುನಿರೀಕ್ಷಿತ ಚಿತ್ರವೇ ‘ಪೆಪೆ’. ಈಗಾಗಲೇ ಪೆಪೆ ಸಿನಿಮಾ ತನ್ನ ಪ್ರಚಾರ, ಟ್ರೈಲರ್ ಹಾಗೂ ವಿನಯ್ ಹೊಸ ಲುಕ್ ಭಾರೀ ಕುತೂಹಲ ಮೂಡಿಸಿದೆ.
ಹೌದು, ಟ್ರೈಲರ್ನಲ್ಲೇ ಕುತೂಹಲ ಮೂಡಿಸಿರುವ ಈ ಸಿನಿಮಾ ಆಗಸ್ಟ್ 30 ರಂದು ಬಿಡುಗಡೆಯಾಗಲಿದೆ. ಇದೀಗ ಸಿನಿಮಾದ ಬಗ್ಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ವಿನಯ್ ರಾಜ್ ಕುಮಾರ್ ಅವರು, ನನಗೆ ಮೊದಲಿಗೆ ಶ್ರೀಲೇಶ್ ನಾಯರ್ ಕಥೆ ಹೇಳಿದಾಗ ಇಷ್ಟ ಆಗಿ ಓಕೆ ಹೇಳಿದೆ.
ನಂತರ ಇದ್ರರಲ್ಲಿರುವ ವಿಷಯ ನನ್ನನ್ನು ತುಂಬಾ ಕಾಡೋಕೆ ಶುರುವಾಯಿತು. ಈ ತರ ವಿಷಯ ನಾನು ಮಾಡ್ಬೋದಾ. ಸ್ಕ್ರೀನ್ನಲ್ಲಿ ಹೇಗೆ ಕಾಣುತ್ತೆ, ಜನರು ಹೇಗೆ ತೆಗೆದು ಕೊಳ್ಳುತ್ತಾರೆ ಎಂಬೆಲ್ಲಾ ಪ್ರಶ್ನೆಗಳು ಹುಟ್ಟಿಕೊಂಡವು. ಯಾಕಂದ್ರೆ ಈ ಸಿನಿಮಾದಲ್ಲಿ ಸಾಕಷ್ಟು ವಿಷಯಗಳನ್ನು ಹೇಳಿದ್ದೇವೆ. ಆಗ ನಾನು ಈ ಬಗ್ಗೆ ನನ್ನ ಫ್ಯಾಮಿಲಿ, ಫ್ರೆಂಡ್ಸ್ ಹಾಗೂ ಡೈರೆಕ್ಟರ್ ಜೊತೆ ಮಾತನಾಡಿದಾಗ ಒಬ್ರು ಹೇಳಿದ್ರು, ಈ ಕಥೆ ಜನರಿಗೆ ಹೇಳ್ಬೇಕು. ಇದರಲ್ಲಿ ಒಂದು ಒಳ್ಳೆ ಕಥೆ ಇದೇ ಎಂದಾಗ ನನಗೆ ಕಾನ್ಫಿಡೆನ್ಸ್ ಬಂತು ಎಂದಿದ್ದಾರೆ.
ಉದಯ್ ಶಂಕರ್.ಎಸ್ ಹಾಗೂ ಕೋಲಾರದ ಬಿ.ಎಮ್.ಶ್ರೀರಾಮ್ ಖರ್ಚಿನಲ್ಲಿ ‘ಪೆಪೆ’ ಅದ್ಧೂರಿಯಾಗಿ ಮೂಡಿಬಂದಿದೆ. ನಿರ್ಮಾಪಕರ ಬಗ್ಗೆ ಮಾತನಾಡಿದ ಅವರು, ‘ಪೆಪೆ’ ಸಿನಿಮಾದ ಕಥೆ ರೆಗ್ಯೂಲರ್ ಸ್ಟೋರಿ ಅಲ್ಲ. ಇಂತಹದೊಂದು ಕಥೆನಾ ತೆಗೆದುಕೊಂಡು ಸಿನಿಮಾ ಮಾಡೋದು ಡೊಡ್ಡ ವಿಷಯ. ಅವರಿಗೆ ಸಿನಿಮಾ ಬಗ್ಗೆ ಇರುವ ಫ್ಯಾಷನ್ ಇಂತಹ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತರಲು ಸಾಧ್ಯವಾಯಿತು ಎಂದು ತಿಳಿಸಿದ್ದಾರೆ.
ಇನ್ನು ನಟ ವಿನಯ್ ರಾಜ್ಕುಮಾರ್ ಮಾಡಿರುವುದು ಕೆಲವೇ ಸಿನಿಮಾ ಆದರೂ ಆರಂಭದಿಂದಲೂ ಹೊಸ ರೀತಿಯ ಪ್ರಯೋಗಗಳನ್ನು ಮಾಡಿದ್ದಾರೆ. ಈ ಸಿನಿಮಾದಲ್ಲಿ ಅವರು ಗ್ಯಾಂಗ್ ಲೀಡರ್ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಟೀಸರ್, ಪೋಸ್ಟರ್ ಅವರ ಲುಕ್ ಕಂಪ್ಲೀಟ್ ಮಾಸ್ ಲುಕ್ನಲ್ಲಿದೆ.
ಮಲೆನಾಡ ಭಾಗದ ಹಳ್ಳಿಯೊಂದರಲ್ಲಿ ಪೆಪೆ ಸಿನಿಮಾದ ಕಥೆ ಸಾಗಲಿದ್ದು, ಜಾತಿ, ರಾಜಕೀಯ, ಸೇಡಿನ ಕಥೆಯನ್ನು ಚಿತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. 90ರ ದಶಕದಲ್ಲಿ ನಡೆಯುವ ಗ್ಯಾಂಗ್ಸ್ಟರ್ ಕಥೆ ಇದಾಗಿದ್ದು, ಚಿತ್ರದಲ್ಲಿ ವಿನಯ್ ಮೊದಲ ಬಾರಿಗೆ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಕಾಜಲ್ ಕುಂದರ್, ಮಯೂರ್ ಪಟೇಲ್, ಯಶ್ ಶೆಟ್ಟಿ, ಅರುಣ ಬಾಲರಾಜ್, ನವೀನ್ ಡಿ ಪಡೀಲ್, ಮೇದನಿ ಕೆಳಮನೆ, ಶಶಿಧರ್ ಭಟ್, ಸಂಧ್ಯಾ ಅರಕೆರೆ ಮುಂತಾದವರು ತಾರಾಗಣದಲ್ಲಿದ್ದಾರೆ.