ಬೆಂಗಳೂರು : ಒಂದು ದಿನದ ಹಿಂದೆ ರಾಜ್ಯದ ಸೂಪರ್‌ಸ್ಟಾರ್‌ಗಳಲ್ಲಿ ಒಬ್ಬರಾಗಿದ್ದ ನಟ ದರ್ಶನ್ ಇಂದು ಕೊಲೆ ಕೇಸ್‌ನಲ್ಲಿ ಪೊಲೀಸ್ ಕಸ್ಟಡಿಗೆ ಸೇರಿದ್ದಾರೆ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎನ್ನುವ ವ್ಯಕ್ತಿಯನ್ನು ಅಮಾನುಷವಾಗಿ ಹತ್ಯೆ ಮಾಡಿದ ಆರೋಪದಲ್ಲಿ ದರ್ಶನ್‌ರನ್ನು ಕೋರ್ಟ್ 6 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ.
ಹೌದು, ಈ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಎಲ್ಲಾ 13 ಆರೊಪಿಗಳನ್ನು ಕೋರ್ಟ್ ಪೊಲೀಸ್ ಕಸ್ಟಡಿಗೆ ನೀಡಿದೆ. ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ.
ಇದೀಗ ಈ ಪವಿತ್ರಾ ಗೌಡ ನಟ ದರ್ಶನ್ ಬಾಳಿಗೆ ಬಂದಿದ್ದೇಗೆ ಎಂಬ ಪ್ರಶ್ನೆ ಹಲವರಲ್ಲಿ ಮೂಡಿದೆ. ಅದಕ್ಕೆ ಉತ್ತರ ಇಲ್ಲಿದೆ. 2011ರಲ್ಲಿ ಪತ್ನಿ ವಿಜಯಲಕ್ಷ್ಮೀ ಮೇಲಿನ ಹಲ್ಲೆಯ ಬೆನ್ನಲ್ಲಿಯೇ ದರ್ಶನ್ ಅವರ ಅದೃಷ್ಟ ಕೂಡ ಕೈಕೊಟ್ಟಿತು. ಬಳಿಕ ಸಿನಿಮಾ ಜೀವನದಲ್ಲಿ ದೊಡ್ಡ ಯಶಸನ್ನು ಕೂಡ ದರ್ಶನ್ ಕಂಡಿದ್ದರು. ಆದರೆ, ಯಶಸ್ಸಿನ ಅಮಲು ಏರಿದಂತೆಲ್ಲಾ, ದರ್ಶನ್ ಅವರ ಕೆಟ್ಟ ಕೆಲಸಗಳು ಮತ್ತೆ ಸುದ್ದಿಯಾಗುತ್ತಲೇ ಹೋದವು.
ಇನ್ನು ಈ ಪವಿತ್ರಾ ಗೌಡ ದರ್ಶನ್ ಅವರ ಜೀವನದಲ್ಲಿ ಬಂದಿದ್ದು ಜಗ್ಗುದಾದಾ ಸಿನಿಮಾದ ಶೂಟಿಂಗ್ ಸಮಯದಲ್ಲಿ. ಜಗ್ಗುದಾದಾ ಶೂಟಿಂಗ್ ಸಮಯದಲ್ಲಿ ಇವರಿಬ್ಬರ ನಡುವೆ ಅಫೇರ್ ಇದೆ ಎನ್ನುವ ವಿಚಾರ ಹೊರಬಂದಿತ್ತು. ಪವಿತ್ರಾ ಗೌಡ ಸಿನಿಮಾ ಇಂಡಸ್ಟ್ರೀಗೆ ಕಾಲಿಡುವ ಮುನ್ನ ಸಂಜಯ್ ಸಿಂಗ್ ಎನ್ನುವ ವ್ಯಕ್ತಿಯ ಜೊತೆ ವಿವಾಹವಾಗಿತ್ತು. ಆದರೆ, ಗ್ಲಾಮರ್ ಜಗತ್ತಿನೆಡೆ ಆಕರ್ಷಣೆ ಹೊಂದಿದ್ದ ಪವಿತ್ರಾ ಆತನಿಗೆ ವಿಚ್ಛೇದನ ನೀಡಿದ್ದರು. ಪವಿತ್ರಾ ಗೌಡ ಅವರಿಗೆ ಖುಷಿ ಎನ್ನುವ ಪುತ್ರಿಯೂ ಇದ್ದಾರೆ.
ಪವಿತ್ರಾ ಗೌಡ ಹಾಗೂ ದರ್ಶನ್ ನಡುವಿನ ಅಫೇರ್ ಇಂದು ನಿನ್ನೆಯದಲ್ಲ. 2015ರಿಂದಲೂ ಇವರಿಬ್ಬರ ನಡುವಿನ ಅಫೇರ್ ಬಗ್ಗೆ ಸುದ್ದಿಗಳು ಬರುತ್ತಲೇ ಇವೆ. ಕನ್ನಡದಲ್ಲಿ ಛತ್ರಿಗಳು ಸಾರ್ ಛತ್ರಿಗಳು ಹಾಗೂ ಬತ್ತಾಸ್‌ನಂಥ ಕೆಲವು ಸಿನಿಮಾಗಳಲ್ಲಿ ಪವಿತ್ರಾ ಗೌಡ ನಟಿಸಿದ್ದಾರೆ. ಆ ನಂತರ ಸಿನಿಮಾದಲ್ಲಿ ಕಾಣಿಸಿಕೊಂಡಿಲ್ಲ.