ಮಂಡ್ಯ : ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ನಾಗಮಂಗಲ ಟೌನ್ ಠಾಣೆ ಇನ್ಸ್ಪೆಕ್ಟರ್ ಅಶೋಕ್ ಕುಮಾರ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ನಿರ್ಲಕ್ಷ್ಯ ಆರೋಪ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಅಶೋಕ್ ಅವರನ್ನು ಸಸ್ಪೆಂಡ್ ಮಾಡಿ IGP ಬೋರಲಿಂಗಯ್ಯ ಆದೇಶ ಹೊರಡಿಸಿದ್ದಾರೆ.
ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಕೋಮುಗಲಭೆ ಉಂಟಾಗಿ, ನಲುಗಿ ಹೋಗಿರುವ ನಾಗಮಂಗಲದಲ್ಲಿ ಪ್ರಸ್ತುತದ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಪ್ರಕರಣ ಸಂಬಂಧ ಈವರೆಗೂ 54 ಮಂದಿಯನ್ನು ಬಂಧಿಸಲಾಗಿದೆ. ನಾಗಮಂಗಲದ ನೆಮ್ಮದಿ ಕೆಡಿಸಿದ 150 ಕಿಡಿಗೇಡಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು ಜಿಲ್ಲಾಡಳಿತ ಮುನ್ನೆಚ್ಚರಿಕೆ ಕ್ರಮವಾಗಿ ನಾಳೆವರೆಗೂ ನಿಷೇಧಾಜ್ಞೆ (144 ಸೆಕ್ಷನ್) ಮುಂದುವರೆಸಿದೆ.
ಈಗಾಗಲೇ ಬಂಧಿತ 52 ಆರೋಪಿಗಳಿಗೆ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಹಿರಿಯ ಸಿವಿಲ್ ನ್ಯಾಯಾಧೀಶರು ಆದೇಶಿಸಿದ್ದಾರೆ. ನಾಗಮಂಗಲದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ದಕ್ಷಿಣ ವಲಯ ಐಜಿಪಿ ಬೋರಲಿಂಗಯ್ಯ ನೇತೃತ್ವದಲ್ಲಿ ಪೊಲೀಸರು ನಿನ್ನೆ ಪಥಸಂಚಲನ ನಡೆಸಿದ್ದಾರೆ. ಹಲವು ಬಡಾವಣೆಗಳಲ್ಲಿ ಗಲಭೆ ಕೋರರಿಗೆ ಎಚ್ಚರಿಕೆ ರವಾನಿಸಿದ್ದು, ಪಟ್ಟಣದ ಆಯಕಟ್ಟಿನ ಸ್ಥಳಗಳಲ್ಲಿ KSRP ತುಕಡಿಗಳ ನಿಯೋಜನೆ ಮಾಡಲಾಗಿದೆ. ಸದ್ಯ ನಾಗಮಂಗಲ ಸಹಜ ಸ್ಥಿತಿಗೆ ಮರಳುತ್ತಿದೆ.
ನಾಗಮಂಗಲ ಪಟ್ಟಣ ಉದ್ವಿಗ್ನ ಹಿನ್ನೆಲೆ ಇವತ್ತು ಕೇಂದ್ರ ಸಚಿವ ಕುಮಾರಸ್ವಾಮಿ ನಾಗಮಂಗಲಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳ ಜತೆ ಸಭೆ ನಡೆಸಿ ಮಾಹಿತಿ ಸಂಗ್ರಹಿಸಿದ್ದಾರೆ. ಗಲಭೆ ನಡೆದ ದರ್ಗಾ ರಸ್ತೆ ಸೇರಿದಂತೆ ಹಲವು ಪ್ರದೇಶಗಳಿಗೆ ಭೇಟಿ ನೀಡಿ, ಅಂಗಡಿ, ವಾಹನ ಕಳೆದುಕೊಂಡ ಸಂತ್ರಸ್ತರ ಜೊತೆ ಕೇಂದ್ರ ಸಚಿವರು ಮಾತುಕತೆ ನಡೆಸಿದ್ದಾರೆ.
ಇದನ್ನೂ ಓದಿ : ಬಿಬಿಎಂಪಿ ವ್ಯಾಪ್ತಿಯಲ್ಲಿ ಗುಂಡಿ ಮುಚ್ಚಲು ಡೆಡ್ಲೈನ್ ಕೊಟ್ಟ ಸಿಎಂ ಸಿದ್ದು..!