ಅವಿನಾಶ್ ವಿಜಯ್‌ಕುಮಾರ್ ನಿರ್ದೇಶನ ‘ಮೈ ಹೀರೋ’ ಈಗಾಗಲೇ ಟ್ರೇಲರ್ ಮೂಲಕ ಪ್ರೇಕ್ಷಕರ ಮನಗೆದ್ದ ಕನ್ನಡದ ಸಿನಿಮಾ. ಈ ಚಿತ್ರವೀಗ ಕಥೆಯ ಮೂಲಕ ಬರೀ ಕರ್ನಾಟಕ ಮಾತ್ರವಲ್ಲ, ವಿದೇಶಗಳಲ್ಲಿಯೂ ಸದ್ದು ಮಾಡುತ್ತಿದೆ. ವರ್ಣಬೇಧ ಮತ್ತು ಜಾತೀಯತೆಯ ಹಿನ್ನೆಲೆಯಲ್ಲಿ ನಿರ್ದೇಶಕರು ಮೈ ಹೀರೋ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಹಾಗಂತ ಇದನ್ನು ಆರ್ಟ್ ಸಿನಿಮಾ ಶೈಲಿಯಲ್ಲಿ ಹೆಣೆಯಲಾಗಿಲ್ಲ, ಔಟ್ ಅಂಡ್ ಔಟ್ ಕಮರ್ಷಿಯಲ್ ದೃಷ್ಟಿಕೋನದಲ್ಲಿಯೇ ಮನರಂಜನೆಯ ದೃಷ್ಟಿಯಲ್ಲಿಯೇ ಸಿನಿಮಾ ಮಾಡಲಾಗಿದೆ. ಇನ್ನೇನು ಇದೇ ಆಗಸ್ಟ್ 30ರಂದು ಈ ಸಿನಿಮಾ ಬಿಡುಗಡೆ ಆಗುತ್ತಿದೆ.
ನಿರ್ದೇಶಕ ಅವಿನಾಶ್ ವಿಜಯ್‌ಕುಮಾರ್ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. “ಅಂತಾರಾಷ್ಟ್ರೀಯ ಮಟ್ಟದ ಸಬ್ಜೆಕ್ಟ್ ಇಟ್ಟುಕೊಂಡು ಈ ಕಥೆ ಮಾಡಿದ್ದೇವೆ. ವಿದೇಶದಲ್ಲಿನ ವರ್ಣಬೇದ ನಮ್ಮಲ್ಲಿನ ಜಾತೀಯತೆಯ ಮೇಲೆ ಇಡೀ ಸಿನಿಮಾ ಸಾಗುತ್ತದೆ. ಸಿಟಿಯಲ್ಲಿ ಈ ಜಾತೀಯತೆ ಬಗ್ಗೆ ಗೊತ್ತಾಗದಿದ್ದರೂ ಹಳ್ಳಿಗಳಲ್ಲಿನ ಸ್ಥಿತಿಯ ಜತೆಗೆ ಹಿಂದುಳಿದ ವರ್ಗದವರ ಮೇಲಿನ ಶೋಷಣೆಯ ಬಗ್ಗೆಯೂ ಈ ಸಿನಿಮಾ ಮೂಲಕ ಹೇಳಹೊರಟಿದ್ದೇವೆ” ಎಂದಿದ್ದಾರೆ.
2020\2021ರಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿ ಬಾಲಕನ ಮೇಲೆ ನಡೆದ ನೈಜ ಕೃತ್ಯ ಆಧರಿತ ಸಿನಿಮಾ ಇದು. ಇದರ ಜತೆಗೆ ಅಮೆರಿಕನ್‌ವೊಬ್ಬರು ಭಾರತದ ಹಿಂದೂಯಿಸಂ ಅನ್ನು ಫಾಲೋ ಮಾಡುತ್ತಿರುತ್ತಾರೆ. ಅದೂ ಕೂಡ ನೈಜ ಘಟನೆ ಆಧರಿತವೇ. ಒಂದು ಸಂದರ್ಭದಲ್ಲಿ ಆ ಇಬ್ಬರೂ ಒಂದೇ ಕಡೆ ಸಿಗ್ತಾರೆ. ಅಲ್ಲಿಂದ ಏನೆಲ್ಲ ಘಟಿಸುತ್ತದೆ ಎಂಬುದೇ ಈ ಸಿನಿಮಾದ ತಿರುಳು. ಆ ಶೋಷಣೆಯ ಬದುಕನ್ನು ಜನರ ಮುಂದೆ ತೆರೆದಿಡಬೇಕು, ಅದರ ನಿರ್ಮೂಲನೆ ಆಗಬೇಕು ಎಂಬುದು ನಮ್ಮ ಚಿತ್ರದ ಮೂಲ ಉದ್ದೇಶ. ಅದನ್ನು ಕಮರ್ಷಿಯಲ್ ಆಗಿಯೇ ಹೇಳಿದ್ದೇವೆ.
ಈ ಸಿನಿಮಾದಲ್ಲಿ ಅಮೆರಿಕನ್ ನಟರೊಬ್ಬರನ್ನೇ ನಾವು ಮುಖ್ಯಪಾತ್ರಧಾರಿಯಾಗಿ ಕರೆದುಕೊಂಡು ಬಂದಿದ್ದೇವೆ. ಈ ಮೂಲಕ ಇಲ್ಲಿನ ಕಾಸ್ಟಿಸಮ್ ಕಥೆಯನ್ನು ಗ್ಲೋಬಲ್ ಮಟ್ಟಕ್ಕೆ ತೆಗೆದುಕೊಂಡು ಹೋಗಿದ್ದೇವೆ. ಅಮೆರಿಕದಲ್ಲಿನ ವರ್ಣಭೇದವನ್ನು ಅಲ್ಲಿನ ನಟರ ಆಂಗಲ್‌ನಿಂದ ಸಿನಿಮಾಕ್ಕೆ ಅಳವಡಿಸಿಕೊಂಡಿದ್ದೇವೆ. ವಿಶೇಷ ಏನೆಂದರೆ ಈ ಚಿತ್ರದಲ್ಲಿ ಅಮೆರಿಕನ್ ಟೆಕ್ನಿಷಿಯನ್‌ಗಳೂ ಕೆಲಸ ಮಾಡಿದ್ದಾರೆ. ಕಥೆಯೂ ಎಲ್ಲ ಕಡೆ ಸಲ್ಲವುದರಿಂದ ನಮಗೂ ಅರ್ಥವಾಗುತ್ತದೆ. ವಿದೇಶಿ ಪ್ರೇಕ್ಷಕರಿಗೂ ಹೊಂದಿಕೆ ಆಗುತ್ತೆ ಎನ್ನುತ್ತಾರೆ ನಿರ್ದೇಶಕ ಅವಿನಾಶ್ ವಿಜಯ್‌ಕುಮಾರ್.
ಇನ್ನೊಂದು ಖುಷಿಯ ವಿಚಾರ ಏನೆಂದರೆ PVR INOX ಅವ್ರು ನಮ್ಮ ಸಿನಿಮಾ ನೋಡಿ, ನಮ್ಮ ಚಿತ್ರಕ್ಕೆ ಅಸೋಸಿಯೇಟ್ ಆಗಿದ್ದಾರೆ. ಈ ಮೂಲಕ ಪ್ಯಾನ್ ಇಂಡಿಯಾ ಇಮೆಜ್ ಸಿಕ್ಕಿದೆ. ಚಿತ್ರಕ್ಕೆ ವಿದೇಶದಲ್ಲಿಯೂ ಬೇಡಿಕೆಯಿದೆ. ಎಲ್ಲರೂ ಆಸಕ್ತಿ ತೋರಿಸುತ್ತಿದೆ. ಸ್ಟೋರಿ ಲೈನ್ ತುಂಬ ಜನ ಮಾಡಿರಬಹುದು, ಆದರೆ, ನಾವು ಅದನ್ನು ತೋರಿಸಿದ ರೀತಿ ತುಂಬ ಫ್ರೆಶ್ ಆಗಿದೆ. ಹಾಲಿವುಡ್‌ನಲ್ಲಿ ಸುಮಾರು 500ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಎರಿಕ್ ರಾಬರ್ಟ್ಸ್ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿದ್ದಾರೆ. ಕಥೆ ಕೇಳಿ ತುಂಬ ಖುಷಿಪಟ್ಟರು. ಸಿನಿಮಾಕ್ಕೆ ಒಪ್ಪಿಗೆ ಕೊಟ್ಟರು.
ಅಮೆರಿಕದಲ್ಲಿ ಎರಡು ಹಾಡಿನ ಜತೆಗೆ ಒಂದಷ್ಟು ಭಾಗದ ಶೂಟಿಂಗ್ ಮಾಡಲು 15 ದಿನ ಬೇಕಾಯ್ತು. ಭಾರತದಲ್ಲಿ 35 ದಿನಗಳ ಕಾಲ ಶೂಟಿಂಗ್ ಮಾಡಿದ್ದೇವೆ. ತಾಂತ್ರಿಕವಾಗಿ ಸಿನಿಮಾ ತುಂಬ ಸ್ಟ್ರಾಂಗ್ ಆಗಿದೆ. ಪ್ರೇಕ್ಷಕರಿಗೂ ಈ ಸಿನಿಮಾ ಇಷ್ಟವಾಗಲಿದೆಯೆಂದು ನಂಬಿದ್ದೇನೆ ಎಂದು ನಿರ್ದೇಶಕ ಅವಿನಾಶ್ ವಿಜಯ್ ಕುಮಾರ್ ಹೇಳಿದ್ದಾರೆ..
ಪಾತ್ರವರ್ಗ: ಎರಿಕ್ ರಾಬರ್ಟ್ಸ್, ಜೇಮ್ಸ್ ಜಿಯೋಯಾ, ಜಿಲಾಲಿ ರೆಜ್ ಕಲ್ಲಾ, ಅಂಕಿತಾ ಅಮರ್, ನಿರಂಜನ್ ದೇಶಪಾಂಡೆ, ತನುಜಾ ಕೃಷ್ಣಪ್ಪ, ಕ್ಷಿತಿಜ್ ಪವಾರ್, ಪ್ರಕಾಶ್ ಬೆಳವಾಡಿ, ದತ್ತಾತ್ರೇಯ, ಮಾಸ್ಟರ್ ವೇದಿಕ್ ಕುಶಾಲ್.
ತಾಂತ್ರಿಕ ವರ್ಗ ಹೀಗಿದೆ
- ಬರಹ ಮತ್ತು ನಿರ್ದೇಶಕ: ಅವಿನಾಶ್ ವಿಜಯ್ ಕುಮಾರ್
- ಪ್ರಸ್ತುತಿ: ಪಿವಿಆರ್ ಸಿನಿಮಾಸ್
- ನಿರ್ಮಾಪಕರು: ಎವಿ ಫಿಲ್ಮ್ ಸ್ಟುಡಿಯೋಸ್
- ಛಾಯಾಗ್ರಹಣ (ಭಾರತ): ವೀನಸ್ ನಾಗರಾಜ್ ಮೂರ್ತಿ
- ಛಾಯಾಗ್ರಹಣ (ಅಮೆರಿಕಾ): ಫಾರೆಸ್ಟ್ ಚಿರಸ್, ಅಕುಲಾ ಲೋಕೇಶ್ ಬಾಬು
- ಸಂಗೀತ ಕಂಪೋಸರ್: ಗಗನ್ ಬಡೇರಿಯಾ
- ಸಂಗೀತ: ರಸ್ಟಿ ಟಿಂಡರ್
- ಹಿನ್ನೆಲೆ ಸಂಗೀತ: ವಿ ಮನೋಹರ್
ಇದನ್ನೂ ಓದಿ : ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ – ಇಂದಿನಿಂದ ಪ್ರೀಮಿಯಂ ಬ್ರ್ಯಾಂಡ್‌ಗಳ ದರ ಇಳಿಕೆ..!