ಸುಂದರವಾದ ಶೀರ್ಷಿಕೆಯಿಂದಲೇ ಗಮನಸೆಳೆಯುತ್ತಿರುವ ‘ಇಬ್ಬನಿ ತಬ್ಬಿದ ಇಳೆಯಲಿ’ ಚಿತ್ರದ ಮತ್ತೊಂದು ಸಾಂಗ್ ರಿಲೀಸ್ ಆಗಿದೆ. ವಿಹಾನ್, ಅಂಕಿತಾ ಅಮರ್ ಪ್ರಮುಖ ಭೂಮಿಕೆಯಲ್ಲಿರುವ, ಚಂದ್ರಜಿತ್ ಬೆಳಿಯಪ್ಪ ನಿರ್ದೇಶನವಿರುವ ಈ ಸಿನಿಮಾದ ‘ಹೇಳು ಗೆಳತಿ’ ಎಂಬ ಮೆಲೋಡಿ ಹಾಡನ್ನು ಚಿತ್ರತಂಡ ಇತ್ತೀಚೆಗಷ್ಟೇ ಬಿಡುಗಡೆ ಮಾಡಿದೆ. ಈ ಹಿಂದೆ ಹರಿಬಿಟ್ಟಿದ್ದ ಹಾಡುಗಳಿಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿತ್ತು. ಇದೀಗ ‘ಹೇಳು ಗೆಳತಿ’ ಹಾಡಿಗೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ ಎಂಬುದು ತಂಡದ ಅನಿಸಿಕೆ. ರೆಟ್ರೋ ಹಿನ್ನೆಲೆಯಲ್ಲಿ ಮೂಡಿ ಬಂದಿರುವ ಈ ಮಾಧುರ್ಯಭರಿತ ಗೀತೆಯನ್ನು ಪರವಃ ಮ್ಯೂಸಿಕ್ ಯೂಟ್ಯೂಬ್ ಚಾನಲ್‌ನಲ್ಲಿ ಬಿಡುಗಡೆ ಮಾಡಿದೆ. ಚರಣ್‌ರಾಜ್ ಈ ಗೀತೆಗೆ ದನಿಗೂಡಿಸಿರುವುದು ವಿಶೇಷ.
ನಾಗಾರ್ಜುನ ಶರ್ಮಾ ಸಾಹಿತ್ಯವಿರುವ ಈ ಹಾಡಿಗೆ ಗಗನ್ ಬಡೇರಿಯಾ ಸಂಗೀತ ಸಂಯೋಜಿಸಿದ್ದಾರೆ. ಸದ್ಯ ಟ್ರೆಂಡ್ ಹುಟ್ಟು ಹಾಕಿರುವ ಈ ಗೀತೆಗೆ ದೀಕ್ಷಿತ್ ಕುಮಾರ್ ನೃತ್ಯ ನಿರ್ದೇಶನವಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಈ ಹಾಡಿಗೆ ಕೇಳುಗರು ಫಿದಾ ಆಗಿದ್ದಾರೆ.
ಪರವಃ ಸ್ಟುಡಿಯೋಸ್ ಲಾಂಛನದಲ್ಲಿ ಜಿ.ಎಸ್.ಗುಪ್ತ, ರಕ್ಷಿತ್ ಶೆಟ್ಟಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಕಿರಿಕ್ ಪಾರ್ಟಿ ಹಾಗೂ ಅವನ್ನೇ ಶ್ರೀಮನ್ನಾರಾಯಣ ಚಿತ್ರಗಳಲ್ಲಿ ಬರಹಗಾರರಾಗಿ ಗುರುತಿಸಿಕೊಂಡಿದ್ದ ಚಂದ್ರಜಿತ್ ಬೆಳಿಯಪ್ಪ, ರಕ್ಷಿತ್‌ರ ‘ಸೆವೆನ್ ಆಡ್ಸ್’ ಬರಹಗಾರರ ತಂಡದ ಪ್ರಮುಖ ಸದಸ್ಯ ಹಾಗೂ ಕಥಾಸಂಗಮ ಚಿತ್ರದ ನಿರ್ದೇಶಕರಲ್ಲೊಬ್ಬರಾಗಿದ್ದರು. ಇದೀಗ ಇಬ್ಬನಿ ತಬ್ಬಿದ ಇಳೆಯಲಿ ಚಿತ್ರವನ್ನು ನಿರ್ದೇಶಿಸಿದ್ದಾರೆ.
ತೆಲುಗಿನ ಸೂಪರ್‌ಹಿಟ್ ‘ಗೀತಾಂಜಲಿ’ ಸೇರಿದಂತೆ ಅನೇಕ ಚಿತ್ರಗಳಲ್ಲಿ ನಟಿಸಿರುವ ಗಿರಿಜಾ ಶೆಟ್ಟರ್ ಬಹಳ ವರ್ಷಗಳ ನಂತರ ನಟನೆಗೆ ಮರಳಿ ಬಂದಿದ್ದಾರೆ. ಮಯೂರಿ ನಟರಾಜ್, ಅನಿರುದ್ಧ್ ಭಟ್, ದಾಮಿನಿ ಧನರಾಜ್ ಮೊದಲಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸದ್ಯ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ಚಿತ್ರತಂಡ ಮಗ್ನವಾಗಿದ್ದು, ವಿಎಫ್‌ಎಕ್ಸ್ ಕೆಲಸ ಪಿನಾಕ ಸ್ಟುಡಿಯೋದಲ್ಲಿ ನಡೆಯುತ್ತಿದೆ. ಶ್ರೀವತ್ಸನ್ ಸೆಲ್ವರಾಜನ್ ಛಾಯಾಗ್ರಹಣ, ರಕ್ಷಿತ್ ಕಾಪ್ ಸಂಕಲನ ಈ ಚಿತ್ರಕ್ಕಿದೆ.
ಇದನ್ನೂ ಓದಿ : ವೃಕ್ಷಮಾತೆ ಸಾಲುಮರದ ತಿಮ್ಮಕ್ಕರ ಉಪಸ್ಥಿತಿಯಲ್ಲಿ ‘ಕೋಟಿ ಕೋಟಿ ರೊಕ್ಕ ಗಳಿಸಿ’ ಹಾಡು ಬಿಡುಗಡೆ..!