ಬೆಂಗಳೂರು : ಕೆಲವು ತಿಂಗಳ ಹಿಂದೆಯಷ್ಟೇ ಮೆಟ್ರೋ ಸಿಬ್ಬಂದಿಯೋರ್ವ ಮಹಿಳೆಯೊಂದಿಗೆ ಅಸಭ್ಯವಾಗಿ ನಡೆದುಕೊಂಡ ಪ್ರಕರಣವೊಂದು ನಡೆದಿತ್ತು. ಇದೀಗ ಮತ್ತೆ ಮೆಟ್ರೋ ಪ್ಲ್ಯಾಟ್ಫಾರ್ಮ್ ವೊಂದರಲ್ಲಿ ಮಹಿಳೆ ಮುಂದೆ ತನ್ನ ಖಾಸಗಿ ಅಂಗ ಸ್ಪರ್ಶಿಸಿಕೊಂಡು ನಮ್ಮ ಮೆಟ್ರೋ ಸಿಬ್ಬಂದಿಯಿಂದಲೇ ಅಸಭ್ಯ ವರ್ತನೆ ತೋರಿರುವಂತಹ ಘಟನೆ ಬೆಂಗಳೂರು ನಗರದ ಜಾಲಹಳ್ಳಿ ಮೆಟ್ರೋ ಸ್ಟೇಷನ್ ನಲ್ಲಿ ನಡೆದಿದೆ.
ಈ ಹಿನ್ನೆಲೆ ಮಹಿಳೆ ಮೇಲಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ಮೆಟ್ರೋ ಅಧಿಕಾರಿಗಳಿಗೆ ದೂರು ನೀಡಿದರೂ ಯಾವುದೇ ಕ್ರಮ ಕೈಗೊಳ್ಳದ ನಿಟ್ಟಿನಲ್ಲಿ ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ಜಾಲಹಳ್ಳಿ ಮೆಟ್ರೋ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಲಾಗಿದೆ.
ಇನ್ನು ಮಹಿಳೆ ನೀಡಿದ ದೂರಿನಲ್ಲಿ, ಮೆಟ್ರೋ ಸಿಬ್ಬಂದಿ ಓರ್ವ ಪ್ಲಾಟ್ಫಾರಂನ ಎದುರು ಭಾಗದಲ್ಲಿ ತನ್ನ ಖಾಸಗಿ ಅಂಗವನ್ನು ಸ್ಪರ್ಶಿಸಿಕೊಂಡು ದುರ್ವರ್ತನೆ ತೋರಿದ್ದಾನೆ. ಕೆಲವು ಸನ್ನೆಗಳನ್ನು ಮಾಡುತ್ತ ನಿರಂತರವಾಗಿ ನನ್ನನ್ನು ದಿಟ್ಟಿಸಿ ನೋಡುತ್ತಿರುವಂತಹ ಅನುಭವ ಹಗಲು ಹೊತ್ತಿನಲ್ಲಿಯೇ ಆಗಿರುವುದು ನನಗೆ ತುಂಬಾ ಕ್ಲಿಷ್ಟಕರವಾಗಿತ್ತು.
ಈ ವಿಷಯದ ಕುರಿತು ನಾನು ಆತನನ್ನು ಪ್ರಶ್ನೆ ಕೂಡ ಮಾಡಿದೆ. ಆದರೆ ಆತ ಕೆಲವು ಸನ್ನೆಗಳನ್ನು ಮಾಡುವ ಮೂಲಕ ನನ್ನನ್ನು ದಿಟ್ಟಿಸಿ ನೋಡುತ್ತಲೇ ಇದ್ದ. ಹಾಗಾಗಿ ನಾನು ವಿಡಿಯೋ ಮಾಡಲು ಆರಂಭಿಸಿದ ನಂತರ ಅವನು ಅಲ್ಲಿಂದ ಹೋದ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ : ಲೋಕಸಭೆ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಕಾಂಗ್ರೆಸ್ ಗೆ ಭರ್ಜರಿ ಲೀಡ್ – ಈ ದಿನ ಡಾಟ್ ಕಾಮ್ ಸ್ಪೋಟಕ ಸಮೀಕ್ಷೆ..!